ಬೆಂಗಳೂರು : ಚಂದನವನದ ರಾಜಕುಮಾರ, ನಟ ಪುನೀತ್ ರಾಜ್ ಕುಮಾರ್ ಅಗಲಿದ ವಿಚಾರ ಇಂದಿಗೂ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅಪ್ಪು ನಿಧನದ ಬಳಿಕ ಪುನೀತ್ ಜೀವನ ಚರಿತ್ರೆಯನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸಬೇಕು ಎಂದು ಸರ್ಕಾರವನ್ನು ಅಭಿಮಾನಿಗಳು ಒತ್ತಾಯಿಸಿದ್ದರು.
ಇದೀಗ ಅಪ್ಪು ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಬೆಂಗಳೂರು ವಿವಿಯ ಪಠ್ಯ ಪುಸ್ತಕದಲ್ಲಿ ಅಪ್ಪು ಜೀವನದ ಆಯ್ದ ಭಾಗವನ್ನು ಅಳವಡಿಸಲಾಗಿದೆ. ಹೌದು, ಬಿಕಾಂ ಪದವಿ ಮೂರನೇ ಸೆಮಿಸ್ಟರ್ ಕನ್ನಡ ಪಠ್ಯ ವಾಣಿಜ್ಯ ಕನ್ನಡ 3ರಲ್ಲಿ ಪುನೀತ್ ಅವರ ಜೀವನದ ಆಯ್ದ ಭಾಗವನ್ನು ಪಠ್ಯಕ್ಕೆ ಅಳವಡಿಸಿಕೊಂಡಿದೆ.
ಪತ್ರಕರ್ತರಾದ ಶರಣು ಹುಲ್ಲೂರು ಬರೆದಿರುವ ನೀನೆ ರಾಜಕುಮಾರ ಕೃತಿಯ ಒಂದು ಅಧ್ಯಾಯವಾದ ಲೋಹೊತ್ ಎಂಬ ಮರಿಮುದ್ದು ಭಾಗವನ್ನು ಪಠ್ಯದಲ್ಲಿ ಅಳವಡಿಸಲಾಗಿದೆ. ಈ ವರ್ಷದ ಬಿ.ಕಾಂ ಪದವಿ ಮೂರನೇ ಸೆಮಿಸ್ಟರ್ ಕನ್ನಡ ಭಾಷಾ ಪಠ್ಯದಲ್ಲಿ ಪುನೀತ್ ಅವರ ಬಾಲ್ಯವನ್ನು ಅಳವಡಿಸಲಾಗಿದೆ. ಇತ್ತೀಚೆಗಷ್ಟೇ ‘ನೀನೇ ರಾಜಕುಮಾರ’ ಪುಸ್ತಕದ ನಾಲ್ಕನೇ ಆವೃತ್ತಿಯನ್ನು ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದ್ದರು.
ಇತ್ತೀಚೆಗೆ ವಿಧಾನಸೌಧದ ಮುಂಭಾಗ ಡಾ.ಪುನೀತ್ರಾಜ್ಕುಮಾರ್ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಗಿತ್ತು, ಈ ಸಮಾರಂಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಡಾ. ರಾಜ್ಕುಮಾರ್ ಕುಟುಂಬದ ಸದ್ಯಸರು, ಖ್ಯಾತ ನಟರಾದ ರಜಿನಿಕಾಂತ್, ಜ್ಯೂ.ಎನ್ಟಿಆರ್ ಸೇರಿದಂತೆ ರಾಜಕೀಯ ನಾಯಕರುಗಳು ಭಾಗವಹಿಸಿದ್ದರು.
ಡಾ|| ಪುನೀತ್ ರಾಜ್ಕುಮಾರ್ ಭಾರತೀಯ ಚಿತ್ರನಟ, ಹಿನ್ನೆಲೆ ಗಾಯಕ ಮತ್ತು ದೂರದರ್ಶನ ನಿರೂಪಕ ಮತ್ತು ಸಿನಿಮಾ ನಿರ್ಮಾಪಕ. ಇವರು 29 ಕನ್ನಡ ಚಲನಚಿತ್ರಗಳಲ್ಲಿ ನಾಯಕ ನಟನಾಗಿ ನಟನೆ ಮಾಡಿದ್ದಾರೆ. ಬಾಲ್ಯದಲ್ಲಿ ತನ್ನ ತಂದೆ ರಾಜಕುಮಾರ್ ಅಭಿನಯದ ಚಿತ್ರಗಳಲ್ಲಿ ಬಾಲನಟನಾಗಿ ಕಾಣಿಸಿಕೊಂಡಿದ್ದರು. ವಸಂತ ಗೀತ ಭಾಗ್ಯವಂತ , ಚಲಿಸುವ ಮೋಡಗಳು, ಎರಡು ನಕ್ಷತ್ರಗಳು , ಭಕ್ತ ಪ್ರಹ್ಲಾದ, ಯಾರಿವನು ಮತ್ತು ಬೆಟ್ಟದ ಹೂವು ) ಚಿತ್ರಗಳಲ್ಲಿ ನಟನೆಗೆ ಮೆಚ್ಚುಗೆ ಪಡೆದರು. ಅವರ ಬೆಟ್ಟದ ಹೂವು ಚಿತ್ರದ ‘ರಾಮು’ ಪಾತ್ರಕ್ಕೆ ಅತ್ಯುತ್ತಮ ಬಾಲ ಕಲಾವಿದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಪಾತ್ರರಾಗಿದ್ದರು. ಚಲಿಸುವ ಮೋಡಗಳು ಮತ್ತು ಎರಡು ನಕ್ಷತ್ರಗಳು ಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಅತ್ಯುತ್ತಮ ಬಾಲ ಕಲಾವಿದ ಪ್ರಶಸ್ತಿಯನ್ನು ಪಡೆದರು. ಪುನೀತ್ ಅವರು 2002 ರಲ್ಲಿ ಅಪ್ಪು ಚಿತ್ರದಲ್ಲಿ ಮೊದಲ ಬಾರಿಗೆ ನಾಯಕನಟನಾಗಿ ಸಿನಿಮಾರಂಗದ ಪಯಣ ಶುರುಮಾಡಿದರು.
‘ಕೋವಿಡ್’ ನಿಂದ ಅವಧಿಗೂ ಮುನ್ನವೇ ‘ಚುನಾವಣೆ’ : ಸಿಎಂ ಬೊಮ್ಮಾಯಿ ಹೇಳಿದ್ದೇನು..?