ಕೆಎನ್ ಎನ್ ನ್ಯೂಸ್ ಡೆಸ್ಕ್ : ಕ್ರಿಸ್ ಮಸ್ ಹಬ್ಬ ಇನ್ನೇನು ಮೂರು ದಿನ ಬಾಕಿ ಇದೆ. ಪ್ರತಿವರ್ಷ ಡಿಸೆಂಬರ್ ಬಂತೆಂದರೆ ಕ್ರೈಸ್ತರಿಗೆ ಸಡಗರ, ಸಂಭ್ರಮ ಹೆಚ್ಚಾಗಿರುತ್ತದೆ.
ಡಿಸೆಂಬರ್ 25ರ ಕ್ರಿಸ್ ಮಸ್ ಆಚರಣೆಗೆ ಇನ್ನೇನು ಕೆಲದಿನಗಳು ಬಾಕಿ ಇದೆ. ಈಗಾಗಲೇ ಎಲ್ಲಡೆ ಹಬ್ಬದ ವಾತಾವರಣ ಶುರುವಾಗಿದೆ. ಹಬ್ಬ ಆಚರಿಸುವವರು ತಮ್ಮ ಪ್ರೀತಿ ಪಾತ್ರರಿಗೆ ಗಿಫ್ಟ್ ಕೊಳ್ಳುವ, ಹಬ್ಬಕ್ಕೆ ರುಚಿ ರುಚಿಯಾದ ತಿಂಡಿಗಳನ್ನು ಮಾಡುವ, ಗೆಸ್ಟ್ಗಳನ್ನು ಆಹ್ವಾನಿಸುವ, ಕ್ರಿಸ್ ಮಸ್ ಟ್ರೀ ಅಲಂಕರಿಸುವ ಬ್ಯುಸಿಯಲ್ಲಿದ್ದಾರೆ.
ಕ್ರಿಸ್ಮಸ್ ಹಬ್ಬದ ಮಹತ್ವ
ಇಡೀ ವಿಶ್ವಕ್ಕೆ ಪ್ರೀತಿ ಮತ್ತು ದಯೆಯ ಸಂದೇಶ ಹಂಚಿದ ಯೇಸು ಕ್ರಿಸ್ತ ಜನಿಸಿದ ದಿನವನ್ನು ಕ್ರಿಸ್ಮಸ್ ಹಬ್ಬವನ್ನಾಗಿ ಪ್ರತಿವರ್ಷ ಆಚರಿಸಲಾಗುತ್ತದೆ. ಈ ದಿನ ಮೇರಿ ಮತ್ತು ಜೋಸೆಫ್ ದಂಪತಿಯ ಪುತ್ರನಾಗಿ ಯೇಸುಕ್ರಿಸ್ತನು ಬೆತ್ಲಹೆಮ್ ಎಂಬಲ್ಲಿ ಜನಿಸುತ್ತಾರೆ. ಗ್ರೀಕ್ ಲಿಪಿಯಲ್ಲಿ ಯೇಸು ಕ್ರಿಸ್ತನ ಮೊದಲ ಅಕ್ಷರವು ಇಂಗ್ಲೀಷಿನಲ್ಲಿ X ನಂತೆ ಕಾಣುವುದರಿಂದ ಈ ಹಬ್ಬವನ್ನು ಕ್ರಿಸ್ಮಸ್ ಎಂದೂ ಇನ್ನೂ ಕೆಲವರು ಎಕ್ಸ್ ಮಸ್ ಎಂದೂ ಬರೆದು ಸಂಬೋಧಿಸುತ್ತಾರೆ. ಡಿಸೆಂಬರ್ 25 ಸಾರ್ವತ್ರಿಕ ರಜಾ ದಿನವಾಗಿದೆ. ಇಸ್ರೇಲ್, ಆಸ್ಟ್ರೇಲಿಯಾ, ಅಮೆರಿಕ, ಬ್ರಿಟನ್, ಜಪಾನ್, ಚೈನಾ, ಈಜಿಪ್ಟ್, ರಷ್ಯಾ, ರೊಮೊನಿಯಾ, ಭಾರತ ಸೇರಿದಂತೆ ಬಹುತೇಕ ದೇಶಗಳು ಪ್ರತಿವರ್ಷ ಕ್ರಿಸ್ಮಸ್ ಆಚರಿಸುತ್ತವೆ.
ಕ್ರಿಸ್ಮಸ್ ಹೇಗೆ ಆಚರಿಸಲಾಗುತ್ತದೆ..?
ಯೇಸು ಕ್ರಿಸ್ತ ಹುಟ್ಟಿದ್ದು ಹಸುವಿನ ಕೊಟ್ಟಿಗೆಯಲ್ಲಿ, ಆದ್ದರಿಂದ ಕ್ರಿಸ್ಮಸ್ ಹಬ್ಬದಂದು ಬಹುತೇಕ ಕ್ರೈಸ್ತರ ಮನೆಯಲ್ಲಿ ಪುಟ್ಟ ಕೊಟ್ಟಿಗೆ ಆಕಾರದ ಆಕೃತಿ ನಿರ್ಮಿಸಿ ಕ್ರೈಸ್ತ, ಮೇರಿ, ಜೋಸೆಫ್ ಸೇರಿದಂತೆ ಕೆಲವು ಗೊಂಬೆಯನ್ನು ಇಡಲಾಗುತ್ತದೆ. ಜೊತೆಗೆ ಕ್ರಿಸ್ ಮಸ್ ಮರಕ್ಕೆ ಲೈಟಿಂಗ್ ಹಾಗೂ ವಿವಿಧ ವಿನ್ಯಾಸದಿಂದ ಅಲಂಕರಿಸಲಾಗುತ್ತದೆ. ಕೇಕ್, ರೋಸ್ ಕುಕೀಸ್, ಕುಲ್ ಕುಲ್ಸ್ ಸೇರಿದಂತೆ ಇನ್ನಿತರ ತಿಂಡಿಗಳನ್ನು ಪ್ರೀತಿ ಪಾತ್ರರಿಗೆ ಹಂಚಲಾಗುತ್ತದೆ. ಸಾಂಟಾಕ್ಲಾಸ್ ವೇಷಧಾರಿ, ಮನೆಗಳಿಗೆ ತೆರಳಿ ಮಕ್ಕಳಿಗೆ ಇಷ್ಟವಾದ ಚಾಕೊಲೇಟ್, ಕುಕೀಸ್ ಸೇರಿದಂತೆ ಇನ್ನಿತರ ಗಿಫ್ಟ್ಗಳನ್ನು ನೀಡುತ್ತಾರೆ.