ಧಾರವಾಡ : 2022-23ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಮತ್ತು ಬಿಳಿಜೋಳ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿರುತ್ತದೆ. ಸದರಿ ತಾಲ್ಲೂಕುಗಳ ಸುತ್ತಮುತ್ತಲೂ ¨ಭತ್ತ ಮತ್ತು ಬಿಳಿಜೋಳ ಬೆಳೆದ ರೈತರು ತಮ್ಮ ವ್ಯಾಪ್ತಿಗೆ ಬರುವ ಖರೀದಿ ಕೇಂದ್ರಗಳಲ್ಲಿ ತಮ್ಮ ಹೆಸರನ್ನು ನೊಂದಣಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಕೃಷಿ ಇಲಾಖೆಯಿಂದ ನೀಡಿದ FRUITSನೋಂದಣಿ ಸಂಖ್ಯೆಯನ್ನು ಒದಗಿಸಿ ರೈತರು ನೋಂದಣಿ ಆಗತಕ್ಕದ್ದು. ರೈತರು ಬೆಳೆದಿರುವ ಬೆಳೆಯ ಮಾಹಿತಿ “FRUITS” (ಪ್ರೂಟ್ಸ್) ದತ್ತಾಂಶದಲ್ಲಿ ಲಭ್ಯವಿಲ್ಲದಿದ್ದರೆ ರೈತರು ತಕ್ಷಣ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ ಬೆಳೆ ಮಾಹಿತಿಯನ್ನು “ಪ್ರೂಟ್ಸ್” ದತ್ತಾಂಶದಲ್ಲಿ ಸೇರ್ಪಡಿಸಿ ನಂತರ ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ನೋಂದಾಯಿಸತಕ್ಕದ್ಧು.
ಪ್ರಸಕ್ತ ಸಾಲಿನಲ್ಲಿ ಪ್ರತಿ ರೈತರಿಂದ ಪ್ರತಿ ಎಕರೆಗೆ 25 ಕ್ವಿಂಟಲ್ ಹಾಗೂ ಗರಿಷ್ಟ 40 ಕ್ವಿಂಟಲ್ ಮಿರದಂತೆ ಭತ್ತ ಹಾಗೂ ಬಿಳಿಜೋಳ 10 ಕ್ವಿಂಟಲ್ ಕನಿಷ್ಟ & 20 ಕ್ವಿಂಟಲ್ ಗರಿಷ್ಟ ಖರೀದಿಸಲಾಗುವುದು.
ರೈತರು ತಮ್ಮ “ಪ್ರೂಟ್ಸ್” ಗುರುತಿನ ಸಂಖ್ಯೆಯೊಂದಿಗೆ ನೋಂದಾಯಿಸಿದ ನಂತರ ತಾವು ಬೆಳೆದ ಭತ್ತದ ಮಾದರಿಯೊಂದಿಗೆ ಬಂದು ತಾವು ಖರೀದಿಗೆ ನೀಡಬಹುದಾದ ದಿನಾಂಕದ ವಿವರಗಳನ್ನು ಖರೀದಿ ಕೇಂದ್ರಗಳಲ್ಲಿ ಪಡೆಯುವುದು. ನಿಗದಿಪಡಿಸುವ ದಿನಾಂಕದಂದು ರೈತರ ಭತ್ತವನ್ನು ಖರೀದಿ ಕೇಂದ್ರಕ್ಕೆ ನೀಡಿ, ಖರೀದಿಯ ಪ್ರಮಾಣದ ಸ್ವೀಕೃತಿಯನ್ನು ಪಡೆದುಕೊಳ್ಳಬೇಕು.
BIGG NEWS : `ಕರ್ನಾಟಕ ಭೂ ಕಂದಾಯ ವಿಧೇಯಕ’ ಮಂಡನೆ : ಇನ್ಮುಂದೆ ಅರ್ಜಿ ಸಲ್ಲಿಸಿದ 7 ದಿನದಲ್ಲಿ ಭೂಪರಿವರ್ತನೆ
ಭತ್ತದ ಮಾದರಿಯನ್ನು ನೇಮಕ ಮಾಡುವ ಗುಣಮಟ್ಟ ಪರಿಶೀಲನಾ ಅಧಿಕಾರಿಯ ಮೂಲಕ ಗುಣಮಟ್ಟ ದೃಢೀಕರಣ ಪಡೆದ ನಂತರವೇ ಭತ್ತವನ್ನು ಖರೀದಿಸಿ ಸಂಗ್ರಹಣೆ ಮಾಡಲಾಗುವುದು. ಕೇಂದ್ರ ಸರ್ಕಾರ ನಿಗದಿಪಡಿಸಿ ಮಾನದಂಡಗಳನ್ವಯ ಎಫ್ಎಕ್ಯೂ ಗುಣಮಟ್ಟವನ್ನು ಗ್ರೇಡರ್ಗಳೊಂದಿಗೆ ದೃಢೀಕರಿಸಬೇಕು.
ಖರೀದಿ ಏಜೆನ್ಸಿಯಾದ ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಸಹಕಾರ ಮಾರುಕಟ್ಟೆ ಮಹಾಮಂಡಳ ಇವರು ರೈತರಿಗೆ ಖರೀದಿ ಬಾಬ್ತು ಬಿಲ್ಲುಗಳನ್ನು ಸಿದ್ದಪಡಿಸುತ್ತಾರೆ ಮತ್ತು ಖರೀದಿ ಬಾಬ್ತು ಹಣವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಸಂದಾಯ ಮಾಡಲು ಕ್ರಮವಹಿಸುತ್ತಾರೆ. ರೈತರಿಂದ ಖರೀದಿ ಮಾಡುವ ಭತ್ತ ಪ್ರಮುಖ ಅಂಶಗಳ ಗುಣಮಟ್ಟದ ಮಿತಿಯಲ್ಲಿರುವ ಭತ್ತವನ್ನು ಹಾಗೂ ಎಫ್ಎಕ್ಯೂ ಗುಣಮಟ್ಟದ ಬಿಳಿಜೋಳ ಮಾತ್ರ ಖರೀದಿಸಲಾಗುವುದು. ರೈತರು ಮಾರಾಟ ಮಾಡುವ ಪದಾರ್ಥದ ಗುಣಮಟ್ಟವು ಈ ಮಿತಿಯಲ್ಲಿಲ್ಲದಿದ್ದಲ್ಲಿ ಅಂತಹ ಪ್ರಮಾಣವನ್ನು ಖರೀದಿ ಕೇಂದ್ರಗಳಲ್ಲಿ ತಿರಸ್ಕರಿಸಲಾಗುವುದು.
ರೈತರಿಂದ ಖರೀದಿ ಕೇಂದ್ರಗಳಿಗೆ ತರುವ ಭತ್ತ, ಬಿಳಿಜೋಳದ ಚೀಲಗಳನ್ನು ಖರೀದಿ ಕೇಂದ್ರಗಳಲ್ಲಿ ತೆರೆದು, ತಂದಿರುವ ಎಲ್ಲಾ ಪ್ರಮಾಣವನ್ನು ಒಂದಾಗಿ ಪರಿಶೀಲಿಸುವುದರಿಂದಾಗಿ ರೈತರು ತಾವು ತರುವ ಪದಾರ್ಥಗಳು ಒಂದೇ ತರಹದ್ದಾಗಿರಬೇಕು. ಒಂದು ವೇಳೆ ಗುಣಮಟ್ಟದಲ್ಲಿ ಯಾವುದೇ ನ್ಯೂನತೆ ಕಂಡುಬಂದಲ್ಲಿ ಸಂಪೂರ್ಣ ಪ್ರಮಾಣವನ್ನು ತಿರಸ್ಕರಿಸಲಾಗುವುದು. ಸರ್ಕಾರವು ಘೋಷಿಸಿರುವ ಬೆಂಬಲ ಬೆಲೆ ರೂ.ಪ್ರತಿ ಕ್ವಿಂ.ಗೆ ಭತ್ತ ಸಾಮಾನ್ಯ 2040/-, ಭತ್ತ ಗ್ರೇಡ್ ಎ-2060/-, ಬಿಳಿಜೋಳ ಹೈಬ್ರಿಡ್-2970/-, ಬಿಳಿಜೋಳ ಮಾಲ್ದಂಡಿ-2990/- ಇರುತ್ತದೆ.
ಜಿಲ್ಲೆಯ ರೈತರು ಮೇಲಿನ ಎಲ್ಲಾ ಅಂಶಗಳನ್ನು ಅನುಸರಿಸಿ ತಾವು ಬೆಳೆದ ಭತ್ತ ಮತ್ತು ಬಿಳಿಜೋಳವನ್ನು ದಿನಾಂಕಃ 01-01-2023 ರಿಂದ 31-03-2023ರ ಒಳಗಾಗಿ ಈಗಾಗಲೇ ಸ್ಥಾಪಿಸಲಾದ ಖರೀದಿ ಕೇಂದ್ರಗಳಿಗೆ ಒದಗಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಖರೀದಿ ಕೇಂದ್ರಗಳಿಗೆ ಭೇಟಿ ನೀಡಬೇಕೆಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.