ಹಾವೇರಿ: ಗ್ರಾಮ ವಾಸ್ತವ್ಯ ಮಾಡುವ ಗ್ರಾಮಗಳ ಅಭಿವೃದ್ಧಿಗೆ 1 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಅವರು ಶಿಗ್ಗಾಂವಿ ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ, ಬಾಡ ಗ್ರಾಮದಲ್ಲಿ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ ಮಾತನಾಡಿದರು.
ಬಿದ್ದುಹೋದ ಮನೆಗಳಿಗೆ 15 ದಿನಗಳೊಳಗೆ ಧನಸಹಾಯ
ಶಿಗ್ಗಾಂವಿಗೆ ಹಲವಾರು ಕಾರ್ಯಕ್ರಮ ಗಳನ್ನು ರೂಪಿಸುತ್ತಿದ್ದು, ಶಿಗ್ಗಾಂವಿ ಸವಣೂರು ತಾಲ್ಲೂಕಿನ ಜನರ ಮನೆಗಳು ಬಿದ್ದುಹೋಗಿವೆ. ಈಗಾಗಲೇ ಆರು ಸಾವಿರ ಮನೆಗಳನ್ನು ನೀಡಿದ್ದರೂ, ಇನ್ನೂ ಕೆಲವು ಉಳಿದಿವೆ. 15 ದಿನಗಳೊಳಗೆ ಧನಸಹಾಯವನ್ನು ಖುದ್ದಾಗಿ ಬಂದು ನೀಡಲಾಗುವುದು ಎಂದು ಘೋಷಣೆ ಮಾಡಿದರು.
ಶಾಲಾ ಬಸ್ಸುಗಳ ಸೌಕರ್ಯ
ಇಲ್ಲಿನ ಮಕ್ಕಳಿಗೆ ಶಾಲಾ ಬಸ್ಸುಗಳ ಕೊರತೆಯಿದ್ದು, ಶಾಲಾ ಮಕ್ಕಳಿಗೆ ವಿಶೇಷ ಬಸ್ಸುಗಳನ್ನು ಒದಗಿಸಲು ಖಾಸಗಿ ಮತ್ತು ಸರ್ಕಾರಿ ಪ್ರಾಯೋಜಕತ್ವದಲ್ಲಿ ಅದರ ಪ್ರಥಮ ಪ್ರಯೋಗ ಕರ್ನಾಟಕದಲ್ಲಿ ಮಾಡಲಾಗುವುದು ಎಂದರು.
ಹಾಸ್ಟೆಲ್ ಗಳನ್ನು ನಿರ್ಮಾಣ
ಎಸ್.ಸಿ.ಎಸ್.ಟಿ ಹಾಸ್ಟೆಲ್ ಗಳ ನಿರ್ಮಾಣ ಕಾಮಗಾರಿ ಪೂರ್ಣ ಗೊಳಿಸುವ ಜೊತೆಗೆ ವಿಶೇಷವಾಗಿ ಶಿಗ್ಗಾಂವಿ ಹಾಗೂ ಸವಣೂರಿನಲ್ಲಿ ತಲಾ 300 ಜನ ಉಳಿಯುವ ಹಾಸ್ಟೆಲ್ ಗಳನ್ನು ನಿರ್ಮಾಣ ಮಾಡಲು ಆದೇಶ ನೀಡಲಾಗಿದೆ. ಈ ಭಾಗಕ್ಕೆ ಮೂಲಭೂತ ಸೌಕರ್ಯಗಳನ್ನು ನಿರಂತರವಾಗಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಶೇ 80 ರಷ್ಟು ಪ್ರಮುಖ ರಸ್ತೆಗಳನ್ನು ಪೂರ್ಣಗೊಳಿಸಲಾಗಿದೆ. ಮುಂದಿನ ಏಪ್ರಿಲ್ ಒಳಗೆ ಎಲ್ಲ ರಸ್ತೆಗಳನ್ನು ಪೂರ್ಣಗೊಳಿಸಲು ಆದೇಶಿಸಲಾಗುವುದು. ಈ ವರ್ಷ ಮಂಜೂರಾಗಿರುವ ಶಾಲೆಗಳನ್ನು ಮುಂದಿನ ಶೈಕ್ಷಣಿಕ ವರ್ಷದೊಳಗೆ ಪೂರ್ಣಗೊಳಿಸಲಾಗುವುದು. ಆಯುರ್ವೇದ ಕಾಲೇಜು, ಬಸ್ ಡಿಪೋ, ಜಿಟಿಟಿಸಿ ಕಾಲೇಜು, ಜವಳಿ ಪಾರ್ಕ್ ನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು.ಇಲ್ಲಿ ಸೌಲಭ್ಯ ಪಡೆಯದ ಫಲಾಭವಿಗಳ ಮನೆಗೆ ಯೋಜನೆ ಮುಟ್ಟಿಸಬೇಕು ಎಂದು ಸೂಚಿಸಿದರು.
ದುಡಿಮೆಗೆ ಮಹತ್ವ
ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ದುಡಿಮೆಗೆ ಮಹತ್ವ ನೀಡಲಾಗಿದೆ. ಮುಂದಿನ ಮಾರ್ಚ್ ಏಪ್ರಿಲ್ ಒಳಗೆ ಈ ಕ್ಷೇತ್ರದ ಪ್ರತಿ ಗ್ರಾಮದ ಪ್ರತಿ ಮನೆಗೂ ಕುಡಿಯುವ ನೀರಿನ ವ್ಯವಸ್ಥೆಯಾಗುತ್ತಿದೆ. 2 ವರ್ಷಗಳ ಅವಧಿಯಲ್ಲಿ 30 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದರು.
ಹತ್ತು ಸಾವಿರ ಮಹಿಳೆಯರಿಗೆ ಉದ್ಯೋಗ
ಶಿಗ್ಗಾಂವಿ, ಸವಣೂರು ಕ್ಷೇತ್ರದ ಎಲ್ಲಾ ಶಾಲೆ ಹಾಗೂ ಕಾಲೇಜುಗಳಿಗೆ ಉತ್ತಮವಾಗಿ ಬಣ್ಣ ಹಚ್ಚಿಸಿದ್ದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು. ಮಹಿಳೆಯರಿಗೆ ಬೃಹತ್ ಜವಳಿ ಪಾರ್ಕ್ ನಿರ್ಮಾಣ ವಾಗಲಿದ್ದು ಸುಮಾರು ಹತ್ತು ಸಾವಿರ ಮಹಿಳೆಯರಿಗೆ ಉದ್ಯೋಗ ನೀಡಲಾಗುವುದು. ಅದಕ್ಕೆ ಈಗಾಗಲೇ ತರಬೇತಿಯನ್ನು ಪ್ರಾರಂಭಿಸಲಾಗಿದೆ. ನಮ್ಮೆಲ್ಲ ಕಾರ್ಯಕ್ರಮಗಳಿಗೆ ಕೈ ಜೋಡಿಸಿ ಕೆಲಸ ಮಾಡುತ್ತಿದ್ದಾರೆ. ಸಚಿವ ಅಶೋಕ್ ಕೂಡ ಜನರಲ್ಲಿ ವಿಶ್ವಾಸ ಮೂಡಿಸಿದ್ದಾರೆ ಎಂದರು.
30 ಸಾವಿರ ಫಲಾನುಭವಿಗಳಿಗೆ ಸವಲತ್ತು
ಸುಮಾರು 30 ಸಾವಿರ ಫಲಾನುಭವಿಗಳಿಗೆ ವಿವಿಧ ಯೋಜನೆಗಳಲ್ಲಿ ಇಂದು ಅನುದಾನ ತಲುಪಿವೆ. ಬಡತನ ನಿರ್ಮೂಲನೆ ಇಲಾಖೆಯಿಂದ ಸುಮಾರು ಆರು ಸಾವಿರ ಫಲಾನುಭವಿಗಳಿಗೆ ಸ್ತ್ರೀ ಶಕ್ತಿ ಸಂಘಗಳಿಗೆ ಒಂದು ಲಕ್ಷ ನೀಡುವ ವ್ಯವಸ್ಥೆ ಮಾಡುತ್ತಿದ್ದು, ಆರು ಸಾವಿರ ಮನೆ ಗಳಿಗೆ ಅನುದಾನ, ರೈತ ವಿದ್ಯಾ ನಿಧಿ, ಕಿಸಾನ್ ಸಮ್ಮಾನ್, ಅಂಗವಿಕಲರ ಮಾಸಾಶನ, ಸಂಧ್ಯಾ ಸುರಕ್ಷಾ ಹಾಗೂ ವಿವಿಧ ಇಲಾಖೆಗಳು ಹಾಗೂ ನಿಗಮಗಳಿಂದ ಒಟ್ಟು 30 ಸಾವಿರ ಫಲಾನುಭವಿಗಳಿಗೆ ಸೌಲಭ್ಯ ತಲುಪಿರುವುದು ಒಂದು ದಾಖಲೆ. ಪ್ರತಿ ಕ್ಷೇತ್ರದಲ್ಲಿಯೂ ಈ ಕಾರ್ಯಕ್ರಮವಾಗಬೇಕು ಎಂದರು.
ಅಭಿವೃದ್ಧಿ ಕಾರ್ಯಕ್ರಮಗಳು
ಶಿಕ್ಷಣ ಕ್ಷೇತ್ರದಲ್ಲಿ ಈ ವರ್ಷ 8000 ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಆಸ್ಪತ್ರೆಗಳ ಉನ್ನತೀಕರಣ,100 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಶಿಗ್ಗಾಂವಿಯಲ್ಲಿ 100 ಹಾಸಿಗೆಗಳ ಆಸ್ಪತ್ರೆಯನ್ನು 250 ಹಾಸಿಗೆಗಳಿಗೆ ಉನ್ನತೀಕರಿಸಲು ಅಡಿಗಲ್ಲು ಹಾಕಲಾಗಿದ್ದು, ಇನ್ನಾರು ತಿಂಗಳಲ್ಲಿ ನಿರ್ಮಾಣವಾಗಲಿದೆ. ನೀರಾವರಿ ಯೋಜನೆಗಳಿಗೆ ಅತಿ ಹೆಚ್ಚು ಅನುದಾನ,ಹೊಸ ಕೈಗಾರಿಕಾ ಪ್ರದೇಶಗಳನ್ನು ಸ್ಥಾಪಿಸಲಾಗುತ್ತಿದೆ. 3000 ರಾಜ್ಯ ಹೆದ್ದಾರಿ, ಸೇತುವೆಗಳನ್ನು ನಿರ್ಮಿಸಿ, ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಲಾಗುತ್ತಿದೆ. ಇದರೊಂದಿಗೆ ರೈತ ವಿದ್ಯಾ ನಿಧಿ ಯೋಜನೆ ಜಾರಿಯಾಗಿದೆ. ಈ ಕ್ಷೇತ್ರದಲ್ಲಿ 3000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಈ ಯೋಜನೆಯ ಲಾಭ ದೊರೆತಿದೆ. ಬರುವ ದಿನಗಳಲ್ಲಿ ಇನ್ನೂ 2 ಸಾವಿರ ಮಕ್ಕಳಿಗೆ ಇದರ ಲಾಭ ದೊರೆಯಲಿದೆ. ಸ್ಸ್ತ್ರೀ ಶಕ್ತಿ, ಸ್ವಾಮಿ ವಿವೇಕಾನಂದರ ಯುವ ಶಕ್ತಿ ಯೋಜನೆ, ಕುಶಲಕರ್ಮಿಗಳಿಗೆ ಕಾಯಕ ಯೋಜನೆಯಡಿ ಸಹಾಯಧನ ನೀಡಿ, ದುಡಿಯುವ ಕೈಗಳಿಗೆ ಕೆಲಸ ನೀಡಲಾಗುತ್ತಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಂ ಹೆಬ್ಬಾರ್, ಕಂದಾಯ ಸಚಿವ ಆರ್.ಅಶೋಕ್, ಶಾಸಕ ನೆಹರೂ ಓಲೇಕರ್, ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.