ಕಾರವಾರ: ಜಿಲ್ಲೆಯ ನಾನಾ ಭಾಗಗಳಲ್ಲಿ ಜಾನುವಾರು ಚರ್ಮಗಂಟು ರೋಗ ಹರಡುತ್ತಿದೆ. ಇದೀಗ ಉತ್ತರಕನ್ನಡ ಜಿಲ್ಲೆಗಳಿಗೂ ಹಬ್ಬಿದ್ದು,ಜಾನುವಾರಗಳು ಸಾವನ್ನಪ್ಪುತ್ತಿವೆ.
ಜಾನುವಾರುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಚರ್ಮಗಂಟು ರೋಗ ದಿನದಿಂದ ದಿನಕ್ಕೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಉಲ್ಬಣಗೊಳ್ಳುತ್ತಿದೆ. ರೈತರ ಒಡನಾಡಿ ಗೋವುಗಳಿಗೆ ಚರ್ಮಗಂಟು ರೋಗ ಹರಡುತ್ತಿದೆ. ಆರಂಭದಲ್ಲಿ ದಕ್ಷಿಣ ಹಾಗೂ ಮಧ್ಯ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಹರಡಿದ್ದ ರೋಗ ಇದೀಗ ಉತ್ತರ ಕನ್ನಡ ಜಿಲ್ಲೆಗೂ ವ್ಯಾಪಿಸಿದೆ.
ಈಗಾಗಲೇ ಜಿಲ್ಲೆಯಾದ್ಯಂತ ಸುಮಾರು 110ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿವೆ. ಒಟ್ಟು 434 ಹಳ್ಳಿಗಳಲ್ಲಿ 2,500ಕ್ಕೂ ಹೆಚ್ಚು ಜಾನುವಾರುಗಳಲ್ಲಿ ರೋಗ ಕಾಣಿಸಿಕೊಂಡಿದೆ. ಸದ್ಯ 1,000 ಜಾನುವಾರುಗಳು ಗುಣಮುಖವಾಗಿದ್ದು, ಲಕ್ಷದಷ್ಟು ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ.ಈ ರೋಗ ಜಿಲ್ಲೆಯ ಭಟ್ಕಳ, ಹೊನ್ನಾವರ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಹೊನ್ನಾವರದ ಸಾಲ್ಕೋಡು ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳ ಅವಧಿಯಲ್ಲಿಯೇ 3 ಆಕಳುಗಳು ಸಾವಿಗೀಡಾಗಿವೆ. ಅಲ್ಲದೆ ರೋಗವು ಒಂದು ಆಕಳಿಂದ ಇನ್ನೊಂದು ಆಕಳಿಗೆ ಹರಡುವ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಗೋವುಗಳನ್ನು ಸಾಕುವವರಲ್ಲಿ ಇದೀಗ ಆತಂಕ ಹೆಚ್ಚಾಗಿದೆ.