ಹೊಸಪೇಟೆ : ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ರೈತರು ಬೆಳೆದ ಬೆಳೆಗಳನ್ನು ಖರೀದಿಸಲು ಡಿ.15 ರಿಂದ ನೊಂದಣಿ ಹಾಗೂ ಜ.1ರಿಂದ ಖರೀದಿ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ತಿಳಿಸಿದರು.
ವಿಜಯನಗರ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಕನಿಷ್ಠ ಬೆಂಬಲ ಬೆಲೆ ಯೋಜನೆ ಕಾರ್ಯಾಚರಣೆಯ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳ ಮೂಲಕ ಭತ್ತ, ರಾಗಿ ಮತ್ತು ಜೋಳ ಖರೀದಿ ಮಾಡಲಾಗುತ್ತದೆ. ಬೆಂಬಲ ಬೆಳೆಗಳನ್ನು ಖರೀದಿಸಲು ರೈತರು ಡಿ.15ರಿಂದ ಪೂರಕ ದಾಖಲೆಗಳೊಂದಿಗೆ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ಖರೀದಿ ಕೇಂದ್ರವಿರುವ ಎಪಿಎಂಸಿಗಳಲ್ಲಿ ನೊಂದಣಿ ಮಾಡಿಸಬೇಕು. ರೈತರಿಂದ ನೇರವಾಗಿ ಖರೀದಿ ಪ್ರಕ್ರಿಯೆಯು 2023ರ ಜನವರಿ 1 ರಿಂದ ಆರಂಭವಾಗಿ 2023ರ ಮಾ.31ರವೆರೆಗೆ ಖರೀದಿ ಮಾಡಲಾಗುತ್ತದೆ. ಇದಕ್ಕೆ ಬೇಕಾದ ನೊಂದಣಿ ಮತ್ತು ಖರೀದಿ ಸಿದ್ದತೆ ಮತ್ತು ಸಂಗ್ರಹಕ್ಕೆ ಗೋದಾಮುಗಳನ್ನು ಸಿದ್ಧಪಡಿಸಿಕೊಳ್ಳಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಖರೀದಿ ಕೇಂದ್ರಗಳು: ಹೊಸಪೇಟೆ ಎಪಿಎಂಸಿ ಯಾರ್ಡ್, ಹರಪನಹಳ್ಳಿ ಎಪಿಎಂಸಿ ಯಾರ್ಡ್, ಹಗರಿಬೊಮ್ಮನಹಳ್ಳಿ ಎಪಿಎಂಸಿ ಯಾರ್ಡ್, ಹಡಗಲಿ ಎಪಿಎಂಸಿ ಯಾರ್ಡ್, ಕೂಡ್ಲಿಗಿ ಮತ್ತು ಕೊಟ್ಟೂರು ಎಪಿಎಂಸಿ ಯಾರ್ಡ್ ಸೇರಿದಂತೆ 5 ಕೇಂದ್ರಗಳನ್ನು ತೆರೆಯಲಾಗಿದೆ. ಹೆಚ್ಚುವರಿಯಾಗಿ ನೊಂದಣಿಗಾಗಿ ಈ ಕೇಂದ್ರಗಳೊಂದಿಗೆ ಎಲ್ಲಾ ರೈತ ಕೇಂದ್ರಗಳಲ್ಲಿಯೂ ಅವಕಾಶ ಕಲ್ಪಿಸಲಾಗಿದೆ.
*ಬೆಂಬಲ ಬೆಲೆ ದರ : ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂಟಲ್ಗೆ ರೂ.2040, ಗ್ರೇಡ್ ಎ-ಭತ್ತಕ್ಕೆ ರೂ.2060, ರಾಗಿಗೆ ರೂ.3578, ಹೈಬ್ರೀಡ್-ಬಿಳಿ ಜೋಳಕ್ಕೆ ರೂ.2970, ಮಾಲ್ದಂಡಿ-ಬಿಳಿ ಜೋಳಕ್ಕೆ ರೂ.2990 ಬೆಂಬಲ ದರ ನಿಗದಿಪಡಿಸಿದೆ ಎಂದು ಅವರು ತಿಳಿಸಿದರು.
ಬೆಂಬಲ ಬೆಲೆ ಕಾರ್ಯಾಚರಣೆ ಬಗ್ಗೆ ಖರೀದಿ ಏಜೆನ್ಸಿಗಳು, ಕೃಷಿ ಇಲಾಖೆ, ಕೃಷಿ ಮಾರುಕಟ್ಟೆ ಇಲಾಖೆಗಳು ಕರಪತ್ರ, ಡಂಗೂರ, ಬ್ಯಾನರ್ ಮೂಲಕ ವ್ಯಾಪಕ ಪ್ರಚಾರ ನೀಡಬೇಕು. ರೈತರು ಮಾರಾಟ ಮಾಡಲು ಬಯಸುವ ಕೃಷಿ ಉತ್ಪನ್ನಗಳ ಸ್ಯಾಂಪಲ್ ಪರೀಕ್ಷೆಯ ಬಗ್ಗೆ ಪ್ರತಿ ಖರೀದಿ ಕೇಂದ್ರದಲ್ಲಿ ಒಂದು ‘ಸ್ಯಾಂಪಲ್ ಪರೀವಿಕ್ಷಣಾ ವಹಿ’ ಇಡಬೇಕು ಎಂದು ಅವರು ತಿಳಿಸಿದರು.
ಖರೀದಿ ಕೇಂದ್ರದ ಕೊಠಡಿ, ಖರೀದಿ ಪ್ರಾಂಗಣ, ಬೆಳಕು, ಕುಡಿಯುವ ನೀರು, ನೆರಳು, ರೈತ ವಿಶ್ರಾಂತಿ, ತುರ್ತು ಟಾರ್ಪಲಿನ್, ರಕ್ಷಣಾ ವ್ಯವಸ್ಥೆ ಮಾಡುವ ಜವಾಬ್ದಾರಿ ಹೊಂದಬೇಕು. ಗಾಳಿ, ಮಳೆ, ಬೆಳಕು ಮುಂತಾದ ಪ್ರಕೃತಿ ಅಥವಾ ಮಾನವ ವಿಕೋಪಗಳಿಂದ ಕೃಷಿ ಉತ್ಪನ್ನ ರಕ್ಷಿಸಲು ಅವಶ್ಯವಿರುವ ಹೊದಿಕೆ, ಹಾಸುಗಳು, ರಕ್ಷಣಾ ಸಾಮಗ್ರಿಗಳನ್ನು ಹಾಗೂ ಖರೀದಿ ಕೇಂದ್ರಗಳಲ್ಲಿ ಎಲ್ಲಾ ಮೂಲ ಸೌಕರ್ಯಗಳನ್ನು ಮಾಡುವ ಜವಾಬ್ದಾರಿಯನ್ನು ಎ.ಪಿ.ಎಂ.ಸಿ ಅಧಿಕಾರಿಗಳು ನಿರ್ವಹಿಸಬೇಕು ಎಂದು ತಿಳಿಸಿದರು.
ತಾಲ್ಲೂಕು ನೋಡಲ್ ಅಧಿಕಾರಿಗಳ ನೇಮಕ:- ಬೆಂಬಲ ಬೆಲೆ ಯೋಜನೆಯನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲು ಹೊಸಪೇಟೆ ತಾಲೂಕಿಗೆ ವಿಜಯನಗರ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು ಮೊ.ಸಂ.8277929660, ಹಗರಿಬೊಮ್ಮನಹಳ್ಳಿ ತಾಲೂಕಿಗೆ ಹಗರಿಬೊಮ್ಮನಹಳ್ಳಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಮೊ.ಸಂ.9972461112, ಹರಪನಹಳ್ಳಿ ತಾಲೂಕಿಗೆ ವಿಜಯನಗರ ಕೃಷಿ ಮಾರಾಟ ಇಲಾಖೆಯ ಉಪ ನಿರ್ದೇಶಕರು ಮೊ.ಸಂ.8550858916, ಹೂವಿನಹಡಗಲಿ ತಾಲೂಕಿಗೆ ವಿಜಯನಗರ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ಮೊ.ಸಂ.6362227568, ಕೂಡ್ಲಿಗಿ ಹಾಗೂ ಕೊಟ್ಟೂರು ತಾಲೂಕಿಗೆ ವಿಜಯನಗರ ಜಿಲ್ಲೆಯ ಸಹಕಾರ ಇಲಾಖೆಯ ಸಹಕಾರ ಸಂಘಗಳ ಉಪನಿಂಧಕರು ಮೊ.ಸಂ.9448887557 ಇವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಸಿ.ಹೇಮಂತ ದೊಡ್ಡಮನಿ, ಎಪಿಎಂಸಿಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.