ಮಾನಸಾ(ಪಂಜಾಬ್): ಇಲ್ಲಿನ ಜಾಚಾ ಬಚಾ ಆಸ್ಪತ್ರೆಯಲ್ಲಿ ವೈದ್ಯರ ಅನುಪಸ್ಥಿತಿಯಲ್ಲಿ ವಿಡಿಯೋ ಕಾಲ್ ಮೂಲಕ ಹೆರಿಗೆ ಮಾಡಿಸಲಾಗಿದ್ದು, ಹೆರಿಗೆ ವೇಳೆ ಗರ್ಭಿಣಿ ಮಹಿಳೆ ಹಾಗೂ ಆಕೆಯ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ.
ವೈದ್ಯರ ಅನುಪಸ್ಥಿತಿಯಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು ವಿಡಿಯೋ ಕಾಲ್ ಮೂಲಕ ಹೆರಿಗೆ ಮಾಡಿದ್ದಾರೆ. ಇದರಿಂದ ತಾಯಿ-ಮಗು ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವವರೆಗೆ ಮೃತರ ಶವ ಸಂಸ್ಕಾರ ಮಾಡಲು ನಿರಾಕರಿಸಿದ ಕುಟುಂಬಸ್ಥರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಮತ್ತೊಂದೆಡೆ, ಆಸ್ಪತ್ರೆ ಆಡಳಿತವು ಸಾವಿಗೆ ಸಂತಾಪ ಸೂಚಿಸಿದ್ದು, ಸೂಕ್ತ ಕ್ರಮಕ್ಕೆ ಭರವಸೆ ನೀಡಿದೆ. ಮಹಿಳೆಯ ಹೆರಿಗೆ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿದ್ದ ಕುಟುಂಬ ಸದಸ್ಯರು ಹಾಗೂ ಸಿಬ್ಬಂದಿಯ ಹೇಳಿಕೆಯನ್ನೂ ದಾಖಲಿಸಿಕೊಂಡಿರುವುದಾಗಿ ಆಡಳಿತ ಹೇಳಿಕೊಂಡಿದೆ. ಆಸ್ಪತ್ರೆಯಲ್ಲಿನ ಆಂತರಿಕ ಸಮಿತಿಯು ಈ ಬಗ್ಗೆ ತನಿಖೆ ನಡೆಸುತ್ತದೆ. ಆದರೆ, ಕುಟುಂಬವು ಇದುವರೆಗೆ ಯಾವುದೇ ಪೊಲೀಸರ ಮಧ್ಯಸ್ಥಿಕೆಯನ್ನು ಕೋರಿಲ್ಲ.
ಪಂಜಾಬ್ನ ಹಲವಾರು ಸರ್ಕಾರಿ ಆಸ್ಪತ್ರೆಗಳು ಸುರಕ್ಷಿತವಾಗಿ ಹೆರಿಗೆ ಮಾಡುವಲ್ಲಿ ಅಸಮರ್ಥತೆಯಿಂದಾಗಿ ಮಕ್ಕಳು ಸಾವನ್ನಪ್ಪಿರುವ ಘಟನೆಗಳು ವರದಿಯಾಗಿದೆ.