ಹುಬ್ಬಳ್ಳಿ : ರಾಜ್ಯದಲ್ಲಿ 438 ನಮ್ಮ ಕ್ಲಿನಿಕ್ ( Namma Clinic ) ಯೋಜನೆಗೆ ಚಾಲನೆ ನೀಡಲು ಮಹೂರ್ತ ಫಿಕ್ಸ್ ಆಗಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಡಿ. 14 ರಂದು ಹುಬ್ಬಳ್ಳಿಯಲ್ಲಿ ಚಾಲನೆ ನೀಡಲಿದ್ದಾರೆ.
ಹುಬ್ಬಳ್ಳಿಯ ಭೈರಿದೇವರಕೊಪ್ಪದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಭೈರಿದೇವರಕೊಪ್ಪದ ರೇಣುಕಾನಗರದಲ್ಲಿ ಸಿಎಂ ‘ನಮ್ಮ ಕ್ಲಿನಿಕ್’ ಉದ್ಘಾಟಿಸಲಿದ್ದು, ನಂತರ ವರ್ಚುವಲ್ ಆಗಿ ರಾಜ್ಯದ ಎಲ್ಲಾ 438 ಕ್ಲಿನಿಕ್ಗಳಿಗೆ ಏಕಕಾಲಕ್ಕೆ ಚಾಲನೆ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಸಂಸದ ಪ್ರಹ್ಲಾದ್ ಜೋಶಿ ಸೇರಿದಂತೆ ಇತರರು ಇರಲಿದ್ದಾರೆ. ನಗರ ಹಾಗೂ ಬಡ ದುರ್ಬಲ ವರ್ಗದ ಜನರಿಗೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ರಾಜ್ಯದ ನಗರ ಪ್ರದೇಶಗಳಲ್ಲಿ ‘ನಮ್ಮ ಕ್ಲಿನಿಕ್’ ಆರಂಭಿಸಲಿದೆ.
ಬೆಳಗ್ಗೆ 9 ರಿಂದ ಸಂಜೆ 4:30ರ ವರೆಗೆ ನಮ್ಮ ಕ್ಲಿನಿಕ್ ಓಪನ್ ಇರಲಿದ್ದು, ಚಿಕಿತ್ಸೆ ಜೊತೆಗೆ ಪ್ರಯೋಗಾಲಯ ಸೇವೆಗಳು ಹಾಗೂ ಔಷಧಿಗಳೂ ಕೂಡ ಸಂಪೂರ್ಣ ಉಚಿತವಾಗಿರಲಿದೆ. 14 ಮಾದರಿಯ ಟೆಸ್ಟ್ ಗಳು ನಮ್ಮ ಕ್ಲಿನಿಕ್ ನಲ್ಲಿ ಸಂಪೂರ್ಣ ಉಚಿತವಿದೆ. . ಸೋಮವಾರದಿಂದ ಶನಿವಾರದ ವರೆಗೆ ಜನರಿಗೆ ಸೇವೆ, ಭಾನುವಾರ ರಜೆ ಇದೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.