ಬೆಂಗಳೂರು : ಮ್ಯಾಂಡಸ್ ಚಂಡಮಾರುತದ ಹಿನ್ನೆಲೆ ರಾಜ್ಯದಲ್ಲಿ ಡಿ.16 ರವರೆಗೆ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ( IMD) ಮುನ್ಸೂಚನೆ ನೀಡಿದೆ.
ಡಿ.16 ರವರೆಗೆ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಭಾರೀ ಮಳೆಯಾಗಲಿದ್ದು, ಚಾಮರಾಜನಗರ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಇನ್ನೂ, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಉತ್ತರ ಕರ್ನಾಟಕದ ಬಾಗಲಕೋಟೆ, ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಹಾವೇರಿ, ಗದಗ ಬಳ್ಳಾರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಿದೆ.
ಇನ್ನೂ, ಮಾಂಡೋಸ್ ಮುನ್ನೆಚ್ಚರಿಕೆ ಹಿನ್ನೆಲೆ ಇಂದು ಸೋಮವಾರ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ರಾಜ್ಯದಲ್ಲಿ ಮಳೆ ನಡುವೆ ಭಾರೀ ಥಂಡಿ ವಾತಾವರಣ ನಿರ್ಮಾಣವಾಗಿದ್ದು, ಹಲವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಜನರು ಮನೆಯಿಂದ ಹೊರಗೆ ಬರದಿರುವ ಹಾಗೆ ರಾಜ್ಯದಲ್ಲಿ ಭಾರೀ ಥಂಡಿ ವಾತಾವರಣ ನಿರ್ಮಾಣವಾಗಿದ್ದು, ಜನರು ಸ್ವೆಟರ್, ಟೊಪ್ಪಿಗಳಿಗೆ ಮೊರೆ ಹೋಗಿದ್ದಾರೆ.