ಒಡಿಶಾ: ಚಳಿಗಾಲದಲ್ಲಿ ರಾತ್ರಿ ಮಲಗಲು ಒಂದೊಳ್ಳೆ ಹಾಸಿಗೆ, ದಿಂಬು ಮತ್ತು ಮಂದನೆಯ ಒದಿಕೆ ಇದ್ರೆ ಸಾಕು ಸುಖನಿದ್ರೆಗೆ ಜಾರಿಬಿಡ್ತೀವಿ. ಆದ್ರೆ, ಇಲ್ಲೊಂದು ಹಳ್ಳಿಯಲ್ಲಿ ಎಲ್ಲಾ ಸೀಸನ್ನಲ್ಲೂ ಚಾಪೆ ಮೇಲೆ ಮಾತ್ರ ಮಲಗುತ್ತಾರೆ. ಗಡಗಡ ನಡುಗಿದ್ರೂ ಸಹ ಹಾಸಿಗೆ ಬಳಸೋದಿಲ್ವಂತೆ.
ಹೌದು, ವಿಚಿತ್ರ ಅನ್ಸಿದ್ರೂ ಇದು ಸತ್ಯ. ಒಡಿಶಾದ ತಿಪಿರಿಸಿಂಗ ಗ್ರಾಮದ ಜನರು ಕೇವಲ ಚಾಪೆ ಮೇಲೆ ಮಾತ್ರ ಮಲಗುತ್ತಾರೆ. ಹಾಸಿಗೆ ಬಳಸಲು ನಿರಾಕರಿಸುತ್ತಾರೆ.
ದಶಕಗಳಿಂದಲೂ ವಿಶಿಷ್ಟ ಸಂಪ್ರದಾಯವನ್ನು ಮುಂದುವರೆಸುತ್ತಾ ಬಂದಿರುವ ಒಡಿಶಾದ ತಿಪಿರಿಸಿಂಗ ಗ್ರಾಮದ ಜನರು ಮಲಗಲು ಹಾಸಿಗೆ ಬಳಸೋದಿಲ್ಲ. ಬದಲಿಗೆ ಚಾಪೆ ಮೇಲೆ ಮಲಗುತ್ತಾರೆ. ಇವರೇನಾದ್ರೂ, ಹಾಸಿಗೆ ಮೇಲೆ ಮಲಗಿದ್ರೆ, ಸಂಪ್ರದಾಯದ ಪ್ರಕಾರ, ‘ಗ್ರಾಮದೇವಿ’ ಅಸಮಾಧಾನವಾಗುತ್ತಾಳೆ ಎಂಬ ನಂಬಿಕೆ ಈ ಜನರದ್ದು. ಅಷ್ಟೇ ಅಲ್ಲ, ಹಾಸಿಗೆ ಮೇಲೆ ಮಲಗಿದ್ರೆ, ಹಾವುಗಳು ಮನೆಗೆ ಬರುತ್ತವೆ ಮತ್ತು ಮಂಚವು ತಿರುಗುತ್ತದೆ ಎಂದು ಗ್ರಾಮಸ್ಥರು ಭಯಪಡುತ್ತಾರೆ. ಇಂತಹ ನಂಬಿಕೆಗಳಿಂದಾಗಿ ಗ್ರಾಮಸ್ಥರು ಹಾಸಿಗೆ ಮೇಲೆ ಮಲಗುವುದಿಲ್ಲ.
ದಿಯೋಗರ್ ಜಿಲ್ಲೆಗೆ ಸೇರಿದ ಈ ಗ್ರಾಮವು ಕೆಲವು ದಶಕಗಳಿಂದ ಸಂಪ್ರದಾಯವನ್ನು ಅನುಸರಿಸುತ್ತಿದೆ. ಹಳ್ಳಿಗರು ಸ್ವಂತ ಹಾಸಿಗೆಗಳನ್ನು ಹೊಂದಿಲ್ಲ. ಗ್ರಾಮ ದೇವತೆಯ ಗೌರವದ ಸಂಕೇತವಾಗಿ ತಮ್ಮ ಮನೆಗಳಲ್ಲಿ ಚಾಪೆಗಳನ್ನು ಮಾತ್ರ ಇಟ್ಟುಕೊಳ್ಳುತ್ತಾರೆ. ಗ್ರಾಮದಲ್ಲಿರುವ ಹೆಚ್ಚಿನ ಜನರು ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದಾರೆ ಮತ್ತು ಯಾವುದೇ ವ್ಯಕ್ತಿಯು ಅನಾರೋಗ್ಯದಿಂದ ಬಳಲುತ್ತಿದ್ದರೂ ಸಹ ನಿಯಮಗಳು ಎಲ್ಲರಿಗೂ ಅನ್ವಯಿಸುತ್ತವೆ.
ಗ್ರಾಮಸ್ಥರೊಬ್ಬರಾದ ಸುಲೋಚನಾ ಕಿಶನ್ ಮಾತನಾಡಿ, ನಮ್ಮ ಗ್ರಾಮ ದೇವತೆ ಬರಿಹನಿಯಲ್ಲಿ ನಮಗೆ ಬಲವಾದ ನಂಬಿಕೆ ಇದೆ. ನಾವು ಹಾಸಿಗೆ ಬಳಸಿದರೆ ನಮಗೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ನಾವು ಚಾಪೆಗಳನ್ನು ಬಳಸುತ್ತೇವೆ ಮತ್ತು ನಮ್ಮ ಅತಿಥಿಗಳು ಸಹ ಸಂಪ್ರದಾಯವನ್ನು ಪಾಲಿಸುತ್ತಾರೆ. ಎಲ್ಲರೂ ಗ್ರಾಮದ ನಿಯಮಗಳನ್ನು ಪಾಲಿಸುತ್ತಿದ್ದಾರೆ. ನಾವು ಅದನ್ನು ಪಾಲಿಸುತ್ತಿದ್ದು, ಯಾರೂ ಹಾಸಿಗೆ ಬಳಸುತ್ತಿಲ್ಲ ಎಂದು ಹೇಳಿದರು.
BIGG NEWS : ಅಂಬುಲೆನ್ಸ್ ಸಿಗದೆ ಗರ್ಭಿಣಿಯ ಪರದಾಟ : 3ವರೆ ಕಿಮೀ ಡೋಲಿಯಲ್ಲೇ ಹೊತ್ತೊಯ್ದ ಗ್ರಾಮಸ್ಥರು
ಭಾರತ್ ಜೋಡೋ ಯಾತ್ರೆ: ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ ಪ್ರಿಯಾಂಕಾ ಗಾಂಧಿ, ಮಹಿಳಾ ಕಾರ್ಯಕರ್ತರು