ಕೆಎನ್ ಎನ್ ನ್ಯೂಸ್ ಡೆಸ್ಕ್ : ಇಂದಿನ ದಿನಗಳಲ್ಲಿ ತೂಕ ಹೆಚ್ಚಳದಿಂದ ಜಿಮ್ ಗೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ದೈಹಿಕವಾಗಿ ಫಿಟ್ ಇರಲು ಪ್ರತಿನಿತ್ಯ ವರ್ಕೌಟ್ ಮಾಡುತ್ತಾರೆ.
ಕೆಲವರು ತೂಕ ಕಳೆದುಕೊಳ್ಳುವ ಸಲುವಾಗಿ ಜಿಮ್ ಮಾಡಿದರೆ, ಇನ್ನೂ ಕೆಲವರು ಸ್ನಾಯುಗಳನ್ನು ನಿರ್ಮಿಸಲು ಜಿಮ್ ಹವ್ಯಾಸ ರೂಢಿಸಿಕೊಳ್ಳುತ್ತಾರೆ.ಜಿಮ್ಗೆ ಹೋಗುವ ಹೆಚ್ಚಿನ ಯುವಕರು, ತಾಲೀಮು ನಂತರ ಶಕ್ತಿಗಾಗಿ ಪ್ರೊಟೀನ್ ಪೌಡರ್ ಸೇವಿಸುತ್ತಾರೆ. ಪೌಡರ್ ಹಾಕಿದ ಪ್ರೊಟೀನ್ ಶೇಕ್ ಹೆಚ್ಚಿನ ಜಿಮ್ ಪಟುಗಳು ಕುಡಿಯುತ್ತಾರೆ. ಹೀಗಾಗಿ ಪ್ರೊಟೀನ್ ಪೌಡರ್ಗೆ ಬೇಡಿಕೆ ಕೂಡಾ ಹೆಚ್ಚಿದೆ. ಇದರಿಂದಾಗಿ ಇದರ ಬೆಲೆ ಕೂಡಾ ಹೆಚ್ಚು. ಮಾರುಕಟ್ಟೆಯಲ್ಲಿ ವಿವಿಧ ಬ್ರ್ಯಾಂಡ್ಗಳ ದುಬಾರಿ ಪ್ರೊಟೀನ್ ಪೌಡರ್ ಕೂಡಾ ಲಭ್ಯವಿದೆ. ಅವರವರ ಸಾಮರ್ಥ್ಯ ಮತ್ತು ಇಚ್ಛೆಗನುಸಾರ ಪೌಡರ್ ಖರೀಸುತ್ತಾರೆ.ʼʼ
ಡೈರಿ ಉತ್ಪನ್ನಗಳಿಂದ ತಯಾರಿಸಿದ ಜೈವಿಕ ಉತ್ಪನ್ನವೇ ಈ ಪ್ರೊಟೀನ್ ಪೌಡರ್. ಇದರಲ್ಲಿ ಗ್ಲೋಬುಲರ್ ಎನ್ನುವ ಪ್ರೊಟೀನ್ ಇರುತ್ತದೆ. ಇದು ದೇಹದಲ್ಲಿ ದೀರ್ಘಕಾಲದ ಶೇಖರಣೆಯಿಂದಾಗಿ ದೇಹಕ್ಕೆ ಹಾನಿಯಾಗುವ ಸಾಧ್ಯತೆಯಿದೆ. ಹೀಗಾಗಿ ದೀರ್ಘಾವಧಿಯ ಬಳಕೆದಾರರಲ್ಲಿ ಈ ಕೆಳಗಿನ ಸಮಸ್ಯೆಗಳು ಉಂಟಾಗಬಹುದು.
ಹೆಚ್ಚು ಮೊಡವೆಗಳು ಬರುತ್ತಿದ್ದರೆ, ಅದಕ್ಕೆ ಪ್ರೊಟೀನ್ ಪೌಡರ್ ಕಾರಣವೇ ಎಂದು ಪರೀಕ್ಷಿಸಬೇಕು. ಇದು ಹೆಚ್ಚಿದ ಪಿಗ್ಮೆಂಟೇಶನ್ಗೆ ಕಾರಣವಾಗಬಹುದು. ಈ ಪುಡಿಗಳು ಹಾರ್ಮೋನುಗಳ ಮೇಲೆ ಪರಿಣಾಮ ಬೀರುವ ಜೈವಿಕ ಸಕ್ರಿಯ ಪೆಪ್ಟೈಡ್ಗಳನ್ನು ಹೊಂದಿರುತ್ತವೆ. ಅವು ಮೇದೋಗ್ರಂಥಿಗಳ ಸ್ರಾವ ಉತ್ಪಾದನೆಯನ್ನು ಹೆಚ್ಚಿಸುತ್ತವೆ. ಇದು ಮುಖದ ಮೇಲೆ ಮೊಡವೆಗಳಿಗೆ ಕಾರಣವಾಗಬಹುದು. ಮೊಡವೆಗಳು ಹೆಚ್ಚು ಆಗುತ್ತಿದ್ದರೆ, ನೀವು ಸೇವಿಸುವ ಪ್ರೊಟೀನ್ ಪುಡಿಯನ್ನು ಕೆಲವು ದಿನಗಳವರೆಗೆ ಸೇವಿಸುವುದನ್ನು ನಿಲ್ಲಿಸಬೇಕು. ಅದರ ಆಧಾರದಲ್ಲಿ ನೀವು ಮುಂದಿನ ನಿರ್ಧಾರ ಕೈಗೊಳ್ಳಬಹುದು. ಇದು ಆಯಾ ವ್ಯಕ್ತಿಗಳ ದೇಹವನ್ನು ಕೂಡಾ ಅವಲಂಬಿಸಿರುತ್ತದೆ.
ನೈಸರ್ಗಿಕ ಆಹಾರದ ಮೂಲಕ ದೇಹದಲ್ಲಿ ಪೋಷಕಾಂಶಗಳು ಸಮತೋಲನದಲ್ಲಿರುತ್ತವೆ. ಹೀಗಾಗಿ ಪ್ರೊಟೀನ್ಗಾಗಿ ಹಾಲು, ಮಾಂಸ ಮತ್ತು ಮೊಟ್ಟೆಗಳನ್ನು ಸೇವಿಸುವುದು ಉತ್ತಮ. ಪ್ರೊಟೀನ್ ಶೇಕ್ಗಳನ್ನು ಅವಲಂಬಿಸುವುದರಿಂದ ದೇಹದಲ್ಲಿ ಪೋಷಕಾಂಶಗಳ ಅಸಮತೋಲನಕ್ಕೆ ಕಾರಣವಾಗಬಹುದು. ಇದರ ಸೇವನೆಯಿಂದ ದೇಹದಲ್ಲಿ ಹೆಚ್ಚಿನ ಪ್ರಮಾಣದ ಪ್ರೊಟೀನ್ ಸಂಗ್ರಹವಾಗುತ್ತದೆ. ಇದು ನಿಮ್ಮ ದೇಹದಲ್ಲಿ ಅಸಮತೋಲನಕ್ಕೆ ಕಾರಣವಾಗುತ್ತದೆ. ದೇಹದಲ್ಲಿ ಹೆಚ್ಚುವರಿ ಪ್ರೊಟೀನ್ ಉಳಿಯುವ ಸಾಧ್ಯತೆಯಿದೆ.