ಬೆಂಗಳೂರು: ಕೋವಿಡ್-19 ( Covid19 ) ಸಂದರ್ಭದಲ್ಲಿ ಸಾರ್ವಜನಿಕರ ಸೇವೆಯನ್ನು ಕೊರೋನಾ ( Corona ) ಭಯಕ್ಕೂ ಲೆಕ್ಕಿಸದೇ ಕರ್ತವ್ಯ ನಿರ್ವಹಿಸಿದ್ದು ಮಾತ್ರ ಸಾರಿಗೆ ಸಿಬ್ಬಂದಿಗಳು. ಕೊರೋನಾ ಸೋಂಕಿನ ಭಯವನ್ನು ಲೆಕ್ಕಿಸದೇ ಕರ್ತವ್ಯ ನಿರ್ವಹಿಸಿದಂತ ನೂರಾರು ಸಾರಿಗೆ ಸಿಬ್ಬಂದಿಗಳು ಕೋವಿಡ್ ಗೆ ಬಲಿಯಾದರು. ಇಂತಹ ಸಿಬ್ಬಂದಿಗಳಿಗೆ ಕೋವಿಡ್ ಪರಿಹಾರವನ್ನು ( Covid Relief ) ನೀಡುವುದಾಗಿ ಘೋಷಿಸಿದಂತ ರಾಜ್ಯ ಸರ್ಕಾರ ( Karnataka Government ) ಮಾತ್ರ ಮರೆತೇ ಬಿಟ್ಟಿದೆ. ಈ ಸೋಂಕಿನಿಂದ ಮೃತಪಟ್ಟವರಲ್ಲಿ ಜಸ್ಟ್ 11 ಸಾರಿಗೆ ಸಿಬ್ಬಂದಿಗಳ ಕುಟುಂಬಕ್ಕೆ ಮಾತ್ರವೇ ಪರಿಹಾರವನ್ನು ವಿತರಿಸಿದೆ.
ಹೌದು.. ನಿಮಗೆ ಇದು ಶಾಕ್ ಅನಿಸಿದ್ರು ಸತ್ಯ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ( Karnataka State Road Transport Corporation – KSRTC ) ನೀಡಿರುವಂತ ಅಂಕಿ ಅಂಶಗಳ ಪ್ರಕಾರ ದಿನಾಂಕ 01-04-2020ರಿಂದ 31-03-2021ರವರೆಗೆ ಮೊದಲ ಅಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಂತ 39 ಸಿಬ್ಬಂದಿಗಳು ಕೊರೋನಾಗೆ ಬಲಿಯಾಗಿದ್ದಾರೆ. ಬಿಎಂಟಿಸಿಯ 39 ಸಿಬ್ಬಂದಿ, ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 32, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ 23 ಸೇರಿದಂತೆ ಒಟ್ಟು 133 ಸಿಬ್ಬಂದಿಗಳು ಸೋಂಕಿನಿಂದ ಮೃತಪಟ್ಟಿದ್ದಾರೆ.
ಈ ಬಳಿಕ ಬಂದ 2ನೇ ಅಲೆಯಲ್ಲಿ ದಿನಾಂಕ 01-04-2021ರಿಂದ ಕೆ ಎಸ್ ಆರ್ ಟಿ ಸಿಯ 59, ಬಿಎಂಟಿಸಿ 70, ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ 48 ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ 41 ಸಿಬ್ಬಂದಿ ಸಹಿತ ಒಟ್ಟು 218 ಮಂದಿ ಮೃತರಾಗಿದ್ದರು. ಒಟ್ಟು ಈವರೆಗೆ ಕೆ ಎಸ್ ಆರ್ ಟಿ ಸಿಯ 98, ಬಿಎಂಟಿಸಿಯ 109, ವಾಕರಸಾಸಂಸ್ಥೆಯ 80, ಕಕರಾರಸಾನಿಗಮದ 64 ಸೇರಿದಂತೆ 351 ಸಾರಿಗೆ ನೌಕರರು ಕೋವಿಡ್ ನಿಂದ ಮೃತರಾಗಿದ್ದಾರೆ.
ರಾಜ್ಯ ಸರ್ಕಾರ ಅಗತ್ಯ ಸೇವೆಗಳ ಸಾಲಿಗೆ ಸಾರಿಗೆ ಇಲಾಖೆಯ ಸಿಬ್ಬಂದಿಗಳನ್ನು ಪರಿಗಣಿಸಿ, ಕೊರೋನಾದಿಂದ ಮೃತರಾದವರಿಗೆ 40 ಲಕ್ಷ ಪರಿಹಾರವನ್ನು ನೀಡುವುದಾಗಿ ಘೋಷಿಸಿತ್ತು. ಆದ್ರೇ 351 ಸಾರಿಗೆ ಸಿಬ್ಬಂದಿಗಳು ಮೃತಪಟ್ಟರೂ, ಘೋಷಿಸಿದಂತ ಪರಿಹಾರವನ್ನು ಮಾತ್ರ ಈವರೆಗೆ ಎಲ್ಲರಿಗೂ ನೀಡಿಲ್ಲ. ಬದಲಾಗಿ ಕೇವಲ ಬಿಎಂಟಿಸಿಯ 4 ಸಿಬ್ಬಂದಿಗಳಿಗೆ ಹಾಗೂ ಕೆ ಎಸ್ ಆರ್ ಟಿ ಸಿ ಯ 7 ಸಿಬ್ಬಂದಿಗಳಿಗೆ ನೀಡಿದೆ.
ಈ ಬಗ್ಗೆ ಸಾರಿಗೆ ಇಲಾಖೆಯ ಮೂಲಗಳಿಂದ “ಕನ್ನಡ ನ್ಯೂಸ್ ನೌ”ಗೆ ತಿಳಿದು ಬಂದ ಮಾಹಿತಿ ಅಂದರೇ, ಕೊರೋನಾ ವೈರಸ್ ನಿಂದ ( Corona Virus ) ಮೃತ ಸಾರಿಗೆ ಸಿಬ್ಬಂದಿಗಳಿಗೆ ಪರಿಹಾರ ಘೋಷಣೆಯನ್ನು ಸರ್ಕಾರ ಮಾಡಿದೆ. ಹೀಗೆ ಇರುವಾಗ 40 ಲಕ್ಷ ಪರಿಹಾರದ ಹಣವನ್ನು ಯಾವುದರಿಂದ ಕೊಡಲಿ ಎಂಬುದಾಗಿದೆ. ನಮ್ಮ ಬಳಿ ಸಿಬ್ಬಂದಿಗಳಿಗೆ ವೇತನ ಪಾವತಿಗೂ ಹಣವಿಲ್ಲ. ಪರಿಹಾರದ ಹಣ ಯಾವುದರಿಂದ ಕೊಡಲಿ. ಮೃತ ಸಿಬ್ಬಂದಿಗಳಿಗೆ ಘೋಷಣೆ ಮಾಡಿದಂತ ಪರಿಹಾರ ನೀಡಲು ಹಣ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ತಿಳಿದು ಬಂದಿದೆ.
ಹಾಗಾದರೇ ರಾಜ್ಯ ಸರ್ಕಾರ ಘೋಷಿಸಿದಂತ ಕೋವಿಡ್ ಪರಿಹಾರದ ಕೇವಲ ಘೋಷಣೆಗೆ ಮಾತ್ರವೇ ಸೀಮಿತವಾಯಿತೇ? ಇಲ್ಲ ಕೇವಲ ಸಿಬ್ಬಂದಿಗಳ ಕಣ್ಣೊರೆಸುವಂತ ತಂತ್ರಗಾರಿಕೆ ಮಾಡಿತೇ? ನುಡಿದಂತೆ ನಡೆಯುವ ಸರ್ಕಾರ ನಮ್ಮದು ಎಂದು ಹೇಳುವಂತ ಸಿಎಂ ಬಸವರಾಜ ಬೊಮ್ಮಾಯಿ ( CM Basavaraj Bommai ), ಸಾರಿಗೆ ಸಚಿವ ಬಿ.ಶ್ರೀರಾಮುಲು ( Transport Minister B Sriramulu ) ಈ ಬಗ್ಗೆ ಗಮನಹರಿಸಿ, ಕೊರೋನಾದಿಂದ ಮೃತ ಸಾರಿಗೆ ಸಿಬ್ಬಂದಿಗಳ ಕುಟುಂಬಕ್ಕೆ ಪರಿಹಾರದ ಹಣ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ವರದಿ: ವಸಂತ ಬಿ ಈಶ್ವರಗೆರೆ