ಬೆಂಗಳೂರು: ಮಾಂಡೂಸ್ ಚಂಡಮಾರುತ ಎಫೆಕ್ಟ್ ನಿಂದಾಗಿ ಮುಂದಿನ ಕೆಲವು ದಿನಗಳು ಬೆಂಗಳೂರಿನಲ್ಲಿ ಮಳೆಯಾಗುವ ಸಂಭವವಿದೆ ಎನ್ನಲಾಗಿದೆ. ಐಎಂಡಿ ಪ್ರಕಾರ, ಬೆಂಗಳೂರು ನಗರ, ಗ್ರಾಮಾಂತರ ಸೇರಿದಂತೆ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಡಿಸೆಂಬರ್ 9 ರ ಶುಕ್ರವಾರದಿಂದ ಮಳೆಯಾಗಲಿದೆ. ಡಿಸೆಂಬರ್ 12 ರವರೆಗೆ ವಾರಾಂತ್ಯದಲ್ಲಿ ಗುಡುಗು ಸಿಡಿಲು ಮತ್ತು ಬಿರುಗಾಳಿ ಸಹಿತ ಮಳೆ ಈ ಪ್ರದೇಶವನ್ನು ಅಪ್ಪಳಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಗರದ ಹವಾಮಾನವನ್ನು ಟ್ರ್ಯಾಕ್ ಮಾಡುವ ‘ಬೆಂಗಳೂರು ಹವಾಮಾನ’ ಎಂಬ ಟ್ವಿಟ್ಟರ್ ಹ್ಯಾಂಡಲ್, “ಚಂಡಮಾರುತದ ಭೂಕುಸಿತದ ನಂತರ ಬೆಂಗಳೂರಿನಲ್ಲಿ ಮಳೆಯನ್ನು ನಿರೀಕ್ಷಿಸಲಾಗಿದೆ, ಮುಂದಿನ ಕೆಲವು ದಿನಗಳಲ್ಲಿ ಬೆಂಗಳೂರಿನಲ್ಲಿ ಒಟ್ಟು 40-80 ಮಿ.ಮೀ ಮಳೆ ಸಂಗ್ರಹವಾಗುವ ನಿರೀಕ್ಷೆಯಿದೆ ಅಂತ ತಿಳಿಸಿದೆ.
ಏತನ್ಮಧ್ಯೆ, ನೈಋತ್ಯ ಮತ್ತು ಪಕ್ಕದ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಆಳವಾದ ವಾಯುಭಾರ ಕುಸಿತವು ಚಂಡಮಾರುತವಾಗಿ ತೀವ್ರಗೊಂಡಿದ್ದರಿಂದ ಐಎಂಡಿ ಗುರುವಾರ ಉತ್ತರ ತಮಿಳುನಾಡು, ಪುದುಚೇರಿ ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿಗಳಿಗೆ ಚಂಡಮಾರುತದ ಎಚ್ಚರಿಕೆಯನ್ನು ನೀಡಿದೆ.