ಖುಂಟಿ (ಜಾರ್ಖಂಡ್): ಭೂ ವಿವಾದಕ್ಕೆ ಸಂಬಂಧಿಸಿದಂತೆ 20 ವರ್ಷದ ಬುಡಕಟ್ಟು ಯುವಕನೊಬ್ಬ ತನ್ನ 24 ವರ್ಷದ ಸೋದರಸಂಬಂಧಿಯ ಶಿರಚ್ಛೇದ ಮಾಡಿದ ಬಳಿಕ ಆರೋಪಿಯ ಸ್ನೇಹಿತರು ಕತ್ತರಿಸಿದ ತಲೆಯೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಈ ಘಟನೆ ಇತ್ತೀಚೆಗೆ ಮುರ್ಹು ಪ್ರದೇಶದಲ್ಲಿ ನಡೆದಿದೆ.
ಡಿಸೆಂಬರ್ 2 ರಂದು ಮೃತನ ತಂದೆ ದಸೈ ಮುಂಡಾ ದಾಖಲಿಸಿದ ಎಫ್ಐಆರ್ ಆಧಾರದ ಮೇಲೆ ಪ್ರಮುಖ ಆರೋಪಿ ಮತ್ತು ಅವನ ಪತ್ನಿ ಸೇರಿದಂತೆ ಆರು ಜನರನ್ನು ಭಾನುವಾರ ಬಂಧಿಸಲಾಗಿದೆ ಎನ್ನಲಾಗಿದೆ.
ಆರೋಪಿಗಳನ್ನು ಬಂಧಿಸಲು ಖುಂಟಿ ಉಪವಿಭಾಗೀಯ ಪೊಲೀಸ್ ಅಧಿಕಾರಿ ಅಮಿತ್ ಕುಮಾರ್ ನೇತೃತ್ವದಲ್ಲಿ ಪೊಲೀಸ್ ತಂಡವನ್ನು ರಚಿಸಲಾಗಿದೆ. ಆರೋಪಿಗಳ ಬಂಧನದ ನಂತರ, ಮುಂಡವು ಕುಮಾಂಗ್ ಗೋಪ್ಲಾ ಅರಣ್ಯದಲ್ಲಿ ಮತ್ತು ತಲೆ 15 ಕಿ.ಮೀ ದೂರದಲ್ಲಿರುವ ದುಲ್ವಾ ತುಂಗ್ರಿ ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ಮುರ್ಹು ಪೊಲೀಸ್ ಠಾಣಾಧಿಕಾರಿ ಚೂಡಾಮಣಿ ಟುಡು ತಿಳಿಸಿದ್ದಾರೆ.
ಆರೋಪಿಗಳು ಕತ್ತರಿಸಿದ ತಲೆಯೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ ಎಂದು ಅಧಿಕಾರಿ]ಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಮೃತರ ಮೊಬೈಲ್ ಫೋನ್ ಗಳು ಸೇರಿದಂತೆ ಐದು ಮೊಬೈಲ್ ಫೋನ್ ಗಳು, ರಕ್ತಸಿಕ್ತವಾದ ಎರಡು ಹರಿತವಾದ ಆಯುಧಗಳು, ಒಂದು ಕೊಡಲಿ ಮತ್ತು ಒಂದು ಎಸ್ ಯುವಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಟುಡು ತಿಳಿಸಿದ್ದಾರೆ.
ಒಂದು ತುಂಡು ಭೂಮಿಗಾಗಿ ಮೃತನ ಕುಟುಂಬ ಮತ್ತು ಆರೋಪಿಗಳ ಕುಟುಂಬಗಳ ನಡುವಿನ ದೀರ್ಘಕಾಲದ ಜಗಳವು ಶಿರಚ್ಛೇದದ ಹಿಂದಿನ ಕಾರಣ ಎಂದು ಹೇಳಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.