ಬೆಳಗಾವಿ : ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಹಿನ್ನೆಲೆಯಲ್ಲಿ ಇಂದು ಬೆಳಗಾವಿಗೆ ಮಹಾರಾಷ್ಟ್ರ ಸಚಿವರು ಭೇಟಿ ನೀಡಬೇಕಿತ್ತು. ಆದರೆ ರಾಜ್ಯ ಸರ್ಕಾರ ಮಹಾರಾಷ್ಟ್ರದ ಸಚಿವರಿಗೆ ಬೆಳಗಾವಿ ಪ್ರವೇಶಕ್ಕೆ ನಿಷೇಧ ಹೇರಿತ್ತು. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸಚಿವರ ಬೆಳಗಾವಿ ಭೇಟಿ ರದ್ದಾಗಿದೆ.
ಈ ಕುರಿತು ಮಾತನಾಡಿರುವ ಮಹಾರಾಷ್ಟ್ರ ಸಚಿವ ಶಂಭುರಾಜ್ ದೇಸಾಯಿ, ಬೆಳಗಾವಿ ಭೇಟಿಗಾಗಿ ಕರ್ನಾಟಕ ಸರ್ಕಾರ ಅವಕಾಶ ನೀಡಿಲ್ಲ. ಡಿಸೆಂಬರ್ 3 ರಂದು ಭೇಟಿ ಮಾಡಲು ನಿರ್ಧರಿಸಿದ್ದೇವು. ಆದರೆ ಕೆಲ ದಲಿತ ಸಂಘಟನೆಗಳು ಡಿಸೆಂಬರ್ 6 ರಂದು ಬೆಳಗಾವಿಗೆ ಬರುವಂತೆ ಮನವಿ ಮಾಡಿದ್ದರು. ಇಂದು ಡಾ.ಬಿ.ಆರ್. ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನವಾಗಿದ್ದು, ಶ್ರದ್ಧಾಂಜಲಿ ಸಲ್ಲಿಕೆ ವೇಳೆ ಅಹಿತಕರ ಘಟನೆ ನಡೆಯಬಾರದ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಬಾರದು ಎಂದು ಬೆಳಗಾವಿ ಭೇಟಿ ಕ್ಯಾನ್ಸಲ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯದ ಉನ್ನತ ಮತ್ತು ತಾಂತ್ರಿಕ ಶಿಕ್ಷಣ, ಜವಳಿ ಹಾಗೂ ಸಂಸದೀಯ ವ್ಯವಹಾರ ಸಚಿವ ಚಂದ್ರಕಾಂತ ಪಾಟೀಲ್, ಅಬಕಾರಿ ಸಚಿವ ಶಂಬುರಾಜ ದೇಸಾಯಿ ಹಾಗೂ ಸಂಸದ ಧೈರ್ಯಶೀಲ ಅವರು ಬೆಳಗಾವಿಗೆ ಭೇಟಿ ನೀಡಿ ಪ್ರಚೋದನಾಕಾರಿ ಭಾಷಣ ಅಥವಾ ಪ್ರಚೋದನಾಕಾರಿ ಹೇಳಿಕೆ ನೀಡುವ ಸಾಧ್ಯತೆಗಳು ಇವೆ. ಈ ಮೂಲಕ ಭಾಷಾ ವೈಷಮ್ಯ ಬೆಳೆದು, ಹೆಚ್ಚಿನ ಪ್ರಮಾಣದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆಗಳಿರುತ್ತವೆ. ಅಲ್ಲದೇ ಸಾರ್ವಜನಿಕರ ಆಸ್ತಿ ಪಾಸ್ತಿಗಳಿಗೆ ಹಾನಿ ಉಂಟಾಗುವ ಸಂಭವ ಇರುತ್ತದೆ. ಈ ನಿಟ್ಟಿನಲ್ಲಿ ದಿನಾಂಕ 06-12-2022ರಂದು ಮಹಾರಾಷ್ಟ್ರ ಸಚಿವರು, ಸಂಸದರು ಬೆಳಗಾವಿ ಗಡಿಯೊಳಗೆ ಪ್ರವೇಶಿಸದಂತೆ ನಿಷೇಧ ಹೇರಿ ಬೆಳಗಾವಿ ಜಿಲ್ಲಾಧಿಕಾರಿಗಳಾದಂತ ನಿತೇಶ್ ಕೆ.ಪಾಟೀಲ್ ಆದೇಶಿಸಿದ್ದಾರೆ.