ಕೊಪ್ಪಳ : ವಿಜಯಪುರ ಜಿಲ್ಲೆಯ ನರಸಲಗಿ ಗ್ರಾಮದ ಇಮಾಮ್ಸಾಬ್ ಜಾಫರಸಾಬ್ ಚಪ್ಪರಬಂದಿ ಎಂಬುವವರು ಇಂದು ಅಂಜನಾದ್ರಿ ದೇವಸ್ಥಾನಕ್ಕೆ ಆಗಮಿಸಿ ಭಾವೈಕ್ಯತೆ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಜಾಫರಸಾಬ್, ಹನುಮದ್ ವ್ರತದ ಅಂಗವಾಗಿ 11 ದಿನ ಹನುಮಮಾಲೆ ಧರಿಸಿ ಭಕ್ತಿ ಶ್ರದ್ಧೆಯಿಂದ ವ್ರತಾಚರಿಸಿದ್ದೇನೆ. ‘ನಾನು ನಿತ್ಯವೂ ಹಿಂದು ಮತ್ತು ನನ್ನ ಧರ್ಮದ ದೇವರ ಪೂಜೆ ಮಾಡುತ್ತೇನೆ. 1994 ರಲ್ಲಿ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದ್ದೆ. ಇದೀಗ ಹನುಮನ ಮಾಲೆ ಧರಿಸಿದ್ದೇನೆ. ನಾನು ಹನುಮನ ಪರಮ ಭಕ್ತ’ ಎಂದರು.
‘ನಾವು ಜಾತಿ, ಧರ್ಮ ಎಂಬ ಸಂಕುಚಿತ ಮನೋಭಾವನೆ ಬಿಡಬೇಕು. ಯಾರ ಮನಸ್ಸಿಗೆ ಏನು ಆಚರಣೆ ಮಾಡಬೇಕು ಎನಿಸುತ್ತದೋ ಅದನ್ನು ಮಾಡಬೇಕು. ನಾವೆಲ್ಲರೂ ಒಂದು ಎಂಬ ಭಾವನೆ ಬಂದರೆ ದೇಶ ತನ್ನಿಂದ ತಾನೇ ಸದೃಢವಾಗುತ್ತದೆ. ಹೊರಗಿನ ಯಾವ ದೇಶದವರೂ ನಮ್ಮಲ್ಲಿ ಕಡ್ಡಿ ಆಡಿಸಲಾಗದು’ ಎಂದು ಅವರು ತಿಳಿ ಹೇಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ