ಬೆಂಗಳೂರು : ಒಕ್ಕಲಿಗ ಸಮುದಾಯದ ಮೀಸಲಾತಿಯನ್ನ 2023 ನೇ ಜನವರಿ 23 ರೊಳಗೆ ಹೆಚ್ಚಿಸುವಂತೆ ಆದಿ ಚುಂಚನಗಿರಿ ಶ್ರೀಗಳು ಸರ್ಕಾರಕ್ಕೆ ಗಡುವು ನೀಡಿದ್ದಾರೆ.
ರಾಜ್ಯ ಒಕ್ಕಲಿಗ ಸಂಘ, ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಸಹಯೋಗದಲ್ಲಿ ಬೆಂಗಳೂರನಲ್ಲಿ ಭಾನುವಾರ ನಡೆದ ಸಭೆಯಲ್ಲಿ ಒಕ್ಕಲಿಗ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಶೇ.4ರಷ್ಟಿರುವ ಮೀಸಲಾತಿ ಪ್ರಮಾಣವನ್ನು ಶೇ.12 ರಷ್ಟು ಹೆಚ್ಚಿಸಬೇಕೆಂದು ಚರ್ಚೆ ನಡೆಸಿ ತಿರ್ಮಾನ ಕೈಗೊಳ್ಳಲಾಯಿತು. ಒಂದು ವೇಳೆ ಸರಕಾರ ಗಡುವಿನೊಳಗೆ ಮೀಸಲು ಪ್ರಮಾಣ ಹೆಚ್ಚಳ ಮಾಡದಿದ್ದಲ್ಲಿ ರಾಜ್ಯಾದ್ಯಂತ ಮೀಸಲಾತಿಗಾಗಿ ಬೃಹತ್ ಹೋರಾಟದ ಕಿಚ್ಚು ಹೊತ್ತಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಶೇ. 4 ರಷ್ಟು ಮೀಸಲಾತಿಯಿಂದ ಒಕ್ಕಲಿಗ ಸಮುದಾಯಕ್ಕೆ ನ್ಯಾಯ ದೊರೆಯುತ್ತಿಲ್ಲ. ರಾಜ್ಯದಲ್ಲಿ ಒಂದು ಕೋಟಿಗೂ ಅಧಿಕ (ಶೇ. 16ರಷ್ಟು) ಒಕ್ಕಲಿಗ ಸಮುದಾಯದ ಜನರಿದ್ದಾರೆ. ಅವರಲ್ಲಿ ಶೇ. 80ರಷ್ಟು ಬಡ ಕುಟುಂಬಗಳಾಗಿದ್ದು, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಹಾಗಾಗಿ, ಜನಸಂಖ್ಯೆಗೆ ಅನುಗುಣವಾಗಿ ಶೇ.12ರಿಂದ 15 ರಷ್ಟು ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು. ಜತೆಗೆ, ಕೇಂದ್ರದ ಒಬಿಸಿ ಪಟ್ಟಿಯಿಂದ ಹೊರಗಿರುವ ಕುಂಚಿಟಿಗ ಸಮುದಾಯ ಸೇರಿ ನಾಲ್ಕು ಒಕ್ಕಲಿಗ ಉಪ ಪಂಗಡಗಳನ್ನು ಒಬಿಸಿ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.
ನಮ್ಮ ಸಮುದಾಯದ ನಾಯಕರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಸಿಎಂ ಎಸ್.ಎಂ. ಕೃಷ್ಣ ಈ ರಾಜ್ಯಕ್ಕೆ ಮತ್ತು ಒಕ್ಕಲಿಗ ಸಮುದಾಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಜನವರಿ 23ಕ್ಕೆ ಈ ಇಬ್ಬರು ದಿಗ್ಗಜರ ಅಭಿನಂದನೆ ಕಾರ್ಯಕ್ರಮವಧಿನ್ನು ರಾಜ್ಯ ಒಕ್ಕಲಿಗರ ಸಂಘ ಹಮ್ಮಿಕೊಂಡಿದೆ. ಸರಕಾರ ಆ ದಿನದಂದೇ ಮೀಸಲಾತಿ ಹೆಚ್ಚಿಸಿ ಆದೇಶ ನೀಡಿದರೆ ವಿಜಯೋತ್ಸವ ಆಚರಿಸಲಾಗುವುದು. ಇಲ್ಲದಿದ್ದರೆ ಸಂಘದ ನಿರ್ಣಯದಂತೆ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.