ಕೆಎನ್ಎನ್ ಡಿಜಿಟಲ್ ಡೆಸ್ಕ್ : ಸಮಂತಾ ನಟನೆಯ ಯಶೋದಾ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಉತ್ತಮ ರೀತಿಯಲ್ಲೇ ಜನರು ಕೂಡ ಸಿನಿಮಾವನ್ನು ಸ್ವೀಕರಿಸಿದ್ದಾರೆ. ಮೊದಲ ಬಾರಿಗೆ ಸಮಂತಾ ಕೂಡ ಆ ರೀತಿಯ ಪಾತ್ರ ಮಾಡಿದ್ದರಿಂದ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಅನಾರೋಗ್ಯದ ನಡುವೆಯೂ ಸಮಂತಾ ಈ ಸಿನಿಮಾಗೆ ಡಬ್ಬಿಂಗ್ ಮಾಡುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಇದೆಲ್ಲದರ ಪರಿಣಾಮ ಬಾಕ್ಸ್ ಆಫೀಸಿನಲ್ಲೂ ಚಿತ್ರ ಸದ್ದು ಮಾಡುತ್ತಿದೆ.
ಸಿನಿಮಾ ರಿಲೀಸ್ ಆದ ಬಹುತೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಈ ನಡುವೆ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ಈ ಚಿತ್ರವನ್ನು ಒಟಿಟಿಗೆ ರಿಲೀಸ್ ಮಾಡಬಾರದು ಎಂದು ಇವಾ ಆಸ್ಪತ್ರೆಯ ಮ್ಯಾನೇಜ್ ಮೆಂಟ್ ಕೋರ್ಟ್ ಮೆಟ್ಟಿಲು ಏರಿದೆ. ಇವಾ ಮಾತುಗಳನ್ನು ಆಲಿಸಿರುವ ಕೋರ್ಟ್ ಕೂಡ ಆಸ್ಪತ್ರೆಯ ಪರವಾಗಿಯೇ ಆದೇಶ ನೀಡಿದೆ. ಒಟಿಟಿಯಲ್ಲಿ ಈ ಸಿನಿಮಾವನ್ನು ಪ್ರದರ್ಶನ ಮಾಡದಂತೆ ಕೋರ್ಟ್ ತಡೆಯಾಜ್ಞೆ ನೀಡಿದೆ.
ಈ ಸಿನಿಮಾದಲ್ಲಿ ಸಮಂತಾ ಬಾಡಿಗೆ ತಾಯಿ ಪಾತ್ರ ಮಾಡಿದ್ದಾರೆ. ಹಾಗಾಗಿ ಸಿನಿಮಾದಲ್ಲಿ ಇವಾ ಆಸ್ಪತ್ರೆಯನ್ನು ತೋರಿಸಲಾಗಿದೆ. ಅದು ಆಸ್ಪತ್ರೆಯ ಘನತೆಗೆ ಧಕ್ಕೆ ಬರುವ ರೀತಿಯಲ್ಲಿ ಆಸ್ಪತ್ರೆಯನ್ನು ತೋರಿಸಲಾಗಿದೆ ಎನ್ನುವುದು ಮ್ಯಾನೇಜ್ ಮೆಂಟ್ ಆರೋಪ. ಆಸ್ಪತ್ರೆಯನ್ನು ಕೆಟ್ಟ ರೀತಿಯಲ್ಲಿ ತೋರಿಸಿದ್ದರಿಂದ ತಮ್ಮ ಆಸ್ಪತ್ರೆಯ ಮೇಲೆ ಅದು ಪರಿಣಾಮ ಬೀರುತ್ತದೆ ಎಂದು ಕೋರ್ಟ್ ಮೆಟ್ಟಿಲು ಏರಿತ್ತು ಮ್ಯಾನೇಜ್ ಮೆಂಟ್.
ಯಶೋದಾ ಯಶಸ್ಸಿನ ಬೆನ್ನಲ್ಲೇ ಸಮಂತಾ ಖುಷಿಯಲ್ಲಿದ್ದರು. ಪಾತ್ರವನ್ನು ಮೆಚ್ಚಿಕೊಂಡಿದ್ದ ಅಭಿಮಾನಿಗಳು ಧನ್ಯವಾದಗಳನ್ನೂ ಅವರು ತಿಳಿಸಿದ್ದರು. ಈ ಸಿನಿಮಾದ ಗೆಲುವು ಚಿತ್ರೋದ್ಯಮಕ್ಕೂ ಚೈತನ್ಯ ತುಂಬಿತ್ತು. ಅಷ್ಟರಲ್ಲಿ ಇಂಥದ್ದೊಂದು ಕಹಿ ಸುದ್ದಿ ಅಭಿಮಾನಿಗಳಿಗೆ ಸಿಕ್ಕಿದೆ. ಚಿತ್ರಮಂದಿರದಲ್ಲಿ ಸಿನಿಮಾ ಓಡುತ್ತಿದ್ದರೂ, ಒಟಿಟಿಯಲ್ಲಿ ಮಾತ್ರ ಅದು ತಡವಾಗಿ ಬರಬಹುದು.