ಬೆಂಗಳೂರು: ಸ್ಯಾಂಡಲ್ ವುಟ್ ನಟ ಚೇತನ್ ( Sandalwood Actor Chetan ), ರಿಶಬ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಹೀಗಾಗಿ ಅವರ ವಿರುದ್ಧ ಪ್ರಕರಣ ಕೂಡ ದಾಖಲಾಗಿತ್ತು. ಈ ಪ್ರಕರಣ ರದ್ದುಕೋರಿ ಹೈಕೋರ್ಟ್ ( Karnataka High Court ) ಮೆಟ್ಟಿಲೇರಿದ್ದರು. ಆದ್ರೇ ಕೋರ್ಟ್ ಪ್ರಕರಣ ರದ್ದುಗೊಳಿಸಲು ನಿರಾಕರಿಸಿದೆ. ಹೀಗಾಗಿ ನಟ ಚೇತನ್ ಗೆ ಸಂಕಷ್ಟ ಎದುರಾದಂತೆ ಆಗಿದೆ.
ಕೆಜಿಎಫ್ ದಾಖಲೆ ಮುರಿದು ಯಶಸ್ವಿ ಪ್ರದರ್ಶನ ಕಾಣುತ್ತಿರುವಂತ ಕಾಂತಾರ ಚಿತ್ರದಲ್ಲಿನ ಭೂತಕೋಲದ ಬಗ್ಗೆ ನಟ ಚೇತನ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಸಂಬಂಧ ನಗರದ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಬಜರಂಗದಳದ ಕಾರ್ಯಕರ್ತ ಶಿವಕುಮಾರ್ ಎಂಬುವರು ದೂರು ನೀಡಿದ್ದರು.
ಶಿವಕುಮಾರ್ ದೂರಿನ ಹಿನ್ನಲೆಯಲ್ಲಿ ಅಕ್ಟೋಬರ್ 22ರಂದು ಪ್ರಕರಣ ದಾಖಲಿಸಿಕೊಂಡಿದ್ದಂತ ಪೊಲೀಸರು, ನಟ ಚೇತನ್ ವಿರುದ್ಧ ತನಿಖೆ ಕೈಗೊಂಡಿದ್ದರು. ಆದ್ರೇ ಈ ಪ್ರಕರಣವನ್ನು ರದ್ದುವಂತೆ ನಟ ಚೇತನ್ ಅರ್ಜಿ ಸಲ್ಲಿಸಿದ್ದರು.
ನಿನ್ನೆ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಂತ ಹೈಕೋರ್ಟ್ ನ ನ್ಯಾಯಮೂರ್ತಿ ಎಂ.ಐ ಅರುಣ್ ಅವರಿದ್ದಂತ ನ್ಯಾಯಪೀಠವು, ಈ ಪ್ರಕರಣ ತನಿಖಾ ಹಂತದಲ್ಲಿದೆ. ಈ ವೇಳೆ ನ್ಯಾಯಾಲಯದ ಹಸ್ತಕ್ಷೇಪ ಸರಿಯಲ್ಲ ಎಂಬುದಾಗಿ ಅಭಿಪ್ರಾಯ ಪಟ್ಟಿತು. ಅಲ್ಲದೇ ಈ ಹಿಂದಿನ ಹಲವು ತೀರ್ಪುಗಳನ್ನು ಆಧರಿಸಿ ಅರ್ಜಿಯನ್ನು ವಜಾಗೊಳಿಸಿದೆ.