ಬುರ್ಹಾನ್ಪುರ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆಯು ಬುಧವಾರ ಮಧ್ಯಪ್ರದೇಶವನ್ನು ಪ್ರವೇಶಿಸಿದೆ. ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ಗಡಿಯಲ್ಲಿರುವ ಬೊಡೆರ್ಲಿ ಗ್ರಾಮದ ಮೂಲಕ ಯಾತ್ರೆಯು ರಾಜ್ಯವನ್ನು ಪ್ರವೇಶಿಸಿದೆ.
ರಾಹುಲ್ ಗಾಂಧಿ ಸಮ್ಮುಖದಲ್ಲಿ ಭಾರತ್ ಜೋಡೊ ಯಾತ್ರೆಯ ಧ್ವಜವನ್ನು ಮಧ್ಯಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷ ಕಮಲ್ ನಾಥ್ಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಮಧ್ಯಪ್ರದೇಶ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಗೋವಿಂದ್ ಸಿಂಗ್ ಸೇರಿದಂತೆ ಪಕ್ಷದ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಯಾತ್ರೆಯು ಬೊಡೆರ್ಲಿ ಬಸ್ ನಿಲ್ದಾಣದಿಂದ ಆರಂಭಗೊಂಡು ಬುರ್ಹಾನ್ಪುರ ಜಿಲ್ಲೆಯ ಜೈನಾಬಾದ್ ಫಟಾದಲ್ಲಿ ನಿಲ್ಲಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಗುಜರಾತ್ ಚುನಾವಣೆ ಪ್ರಚಾರದಲ್ಲಿ ರಾಹುಲ್ ಭಾಗಿ
ದೇಶದಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಗುಜರಾತ್ ಚುನಾವಣೆ ಪ್ರಚಾರದಲ್ಲಿ ರಾಹುಲ್ ಗಾಂಧಿ ಪಾಲ್ಗೊಂಡಿದ್ದರು. ಸೋಮವಾರ ಹಾಗೂ ಮಂಗಳವಾರ ಗುಜರಾತ್ನಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಹಾಗೂ ಗುಜರಾತ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಬಿಜೆಪಿ ನೇತೃತ್ವದ ಸರ್ಕಾರ ಆದಿವಾಸಿಗಳನ್ನು ಕಡೆಗಣಿಸುತ್ತಿದೆ. ಇಬ್ಬರು ಬಂಡವಾಳಶಾಹಿಗಳಿಗೆ ಲಾಭ ಮಾಡಿಕೊಡುತ್ತಿದೆ. ಬಿಜೆಪಿ ಹಾಗೂ ಆರ್ಎಸ್ಎಸ್ನವರು ಆದಿವಾಸಿಗಳನ್ನು ವನವಾಸಿಗಳೆಂದು ಕರೆಯುತ್ತಾರೆ. ಆದಿವಾಸಿಗಳೇ ಇಲ್ಲಿನ ಮೂಲ ನಿವಾಸಿಗಳು. ಬಿಜೆಪಿಯವರಿಗೆ ಆದಿವಾಸಿಗಳ ಮಕ್ಕಳು ಎಂಜಿನಿಯರ್ಗಳು, ಡಾಕ್ಟರ್ಗಳಾಗುವುದು ಬೇಡ ಎಂದು ಹರಿಹಾಯ್ದಿದ್ದರು. ಗುಜರಾತ್ನಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಇಲ್ಲಿರುವುದು ಭ್ರಷ್ಟಾಚಾರ ಪ್ಲಸ್ ಕಮಿಷನ್ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದರು