ಬೆಂಗಳೂರು: ಕೇಂದ್ರ ಚುನಾವಣಾ ಆಯೋಗಕ್ಕೆ ರಾಜ್ಯ ಸರ್ಕಾರದ ವಿರುದ್ಧ ದೂರು ಸಲ್ಲಿಕೆ ಮತ್ತು ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ಇಂದು ಬೆಳಿಗ್ಗೆ 7:30ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಡಿಕೆಶಿ ಹಾಗೂ ಹಲವು ರಾಜ್ಯ ಕಾಂಗ್ರೆಸ್ ನಾಯಕರು ದೆಹಲಿಗೆ ತೆರಳಿದ್ದಾರೆ. ಚಿಲುಮೆ ಹೆಸರಿನ ಖಾಸಗಿ ಸಂಸ್ಥೆ ಮೂಲಕ ಮತದಾರರ ಖಾಸಗಿ ಮಾಹಿತಿಯನ್ನು ರಾಜ್ಯ ಸರ್ಕಾರ ಅಕ್ರಮವಾಗಿ ಸಂಗ್ರಹಿಸುವ ಕಾರ್ಯ ಮಾಡಿದೆ. ಚುನಾವಣಾ ಆಯೋಗದ ಗಮನಕ್ಕೆ ತರದೆ ರಾಜ್ಯ ಸರ್ಕಾರ ಕೈಗೊಂಡಿರುವ ಈ ಕ್ರಮ ಕಾನೂನು ಪ್ರಕಾರ ಅಪರಾಧವಾಗಿದ್ದು ಇದರಲ್ಲಿ ಪ್ರಮುಖವಾಗಿ ಭಾಗಿಯಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅವರ ಸಂಪುಟದ ಕೆಲ ಸಚಿವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ಮನವಿ ಮಾಡಲಿದ್ದಾರೆ.