ಬೆಂಗಳೂರು : ಬೆಂಗಳೂರಿನ ಬಸವನಗುಡಿಯಲ್ಲಿ ಇಂದಿನಿಂದ ಐತಿಹಾಸಿಕ ಕಡಲೆಕಾಯಿ ಪರಿಷೆ ಆರಂಭವಾಗಲಿದ್ದು. ಇಂದು ಸಂಜೆ 6.30 ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದಾರೆ.
ಈ ಹಿಂದೆ ಕಡಲೆಕಾಯಿ ಪರಿಷೆಯ ವೇಳೆ ಕೆಂಪಾಂಬುಂಧಿ ಕೆರೆಯಲ್ಲಿ ನಂದಿ ತೆಪ್ಪೋತ್ಸವ ನಡೆಸಲಾಗುತ್ತಿತ್ತು, ಆದರೆ ಇತ್ತೀಚಿನ ವರ್ಷದಲ್ಲಿ ಇದು ಸ್ಥಗಿತಗೊಂಡಿದ್ದು, ಈ ವರ್ಷ ಮತ್ತೆ ಕೆಂಪಾಂಬುಂಧಿ ಕೆರೆಯಲ್ಲಿ ನಂದಿ ತೆಪ್ಪೋತ್ಸವ ನಡೆಸಲು ತೀರ್ಮಾನಿಸಲಾಗಿದೆ.
ಐದು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದ್ದು, ಕಡಲೆಕಾಯಿ ಪರಿಷೆ, ತೆಪ್ಪೋತ್ಸವ ಜೊತೆಗೆ ಬ್ಯೂಗಲ್ ರಾಕ್ ನತ್ತು ನರಸಿಂಹಸ್ವಾಮಿ ಉದ್ಯಾನವನದಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿದೆ. ಬರೋಬ್ಬರಿ ಐದು ದಶಕಗಳ ಕಾಲದ ಇತಿಹಾಸ ಹೊಂದಿರುವ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಕ್ಷಣಗಣನೆ ಆರಂಭವಾಗಿದ್ದು, ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ತುಲಾಭಾರ ಕಾರ್ಯಕ್ರಮದ ಮೂಲಕ ಚಾಲನೆ ನೀಡಲಿದ್ದಾರೆ.
ಮುನ್ನೆಚರಿಕೆ ಕ್ರಮವಾಗಿ ಹಲವು ಕಡೆ ಸಿ.ಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಭಕ್ತಾದಿಗಳಿಗೆ ಮಾಹಿತಿ ನೀಡಲು ಹೋಂ ಗಾರ್ಡ್ಸ್, ಪೋಲೀಸ್ ಇಲಾಖೆ ಹಾಗೂ ಧ್ವನಿವರ್ಧಕಗಳನ್ನು ಬಳಸಿಕೊಳ್ಳಲಾಗುವುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಹಣಕಾಸು) ಜಯರಾಮ್ ರಾಯ್ ಪುರ ಮಾಹಿತಿ ನೀಡಿದ್ದಾರೆ.