ಬೆಂಗಳೂರು: ಮೆಟ್ರೋ ರೈಲು ವ್ಯವಸ್ಥೆಯು ಸುಗಮ ಸಂಚಾರ ಸಾಧ್ಯವಾಗಿಸುತ್ತಿದೆ. 2025ರ ಜೂನ್ ಹೊತ್ತಿಗೆ `ನಮ್ಮ ಮೆಟ್ರೋ’ ಜಾಲದಲ್ಲಿ 175 ಕಿ.ಮೀ. ಉದ್ದದ ಮಾರ್ಗ ಸಿದ್ಧವಾಗಲಿದೆ ಎಂದು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನಮ್ಮ ಮೆಟ್ರೋದ 2 ಮತ್ತು 3ನೇ ಹಂತದ ಕಾಮಗಾರಿಗಳು ಸಂಪೂರ್ಣವಾಗಿ ಮುಗಿದರೆ, ನಗರದಲ್ಲಿ 2041ರ ಹೊತ್ತಿಗೆ ಒಟ್ಟು 314 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ಸಿದ್ಧವಾಗಲಿದೆ. ಸದ್ಯಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆ ಮೆಟ್ರೋ ಕಾಮಗಾರಿ ಭರದಿಂದ ಸಾಗುತ್ತಿದೆ. ಆದರೆ ಸ್ವಂತ ವಾಹನಗಳನ್ನು ಬಿಟ್ಟು ಸಾರ್ವಜನಿಕ ಸಾರಿಗೆಯ ಕಡೆಗೆ ಜನರನ್ನು ಕರೆತರುವುದೇ ದೊಡ್ಡ ಸವಾಲಾಗಿದೆ ಎಂದು ಅವರು ಪ್ರತಿಪಾದಿಸಿದರು.