ಚಿತ್ರದುರ್ಗ : ಮುರುಘಾ ಶರಣದ ವಿರುದ್ಧ ಕೇಸ್ ದಾಖಲಿಸಲು ಪಿತೂರಿ ನಡೆಸಿ ಜೈಲು ಪಾಲಾಗಿರುವ ಮಾಜಿ ಶಾಸಕ ಎಸ್. ಕೆ ಬಸವರಾಜನ್ ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಇದರ ನಡುವೆ ಬಸವರಾಜನ್ ಪರ ವಕೀಲರು ಬಸವರಾಜನ್ ಬಿಡುಗಡೆಗೆ ಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ವಕೀಲ ಜಯಪ್ಪರಿಂದ ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ.
ಜಾಮೀನು ಅರ್ಜಿಯಲ್ಲಿ ಬಸವರಾಜನ್ ಕುರಿತು ಮಾಜಿ ಶಾಸಕ, ಗೌರವಾನ್ವಿತ ವ್ಯಕ್ತಿ ಹಾಗೂ ಬಸವರಾಜನ್ ವಿರುದ್ಧ ಪಿತೂರಿ ಎಂದು ಉಲ್ಲೇಖಿಸಿ ಜಾಮೀನು ಅರ್ಜಿ ಸಲ್ಲಿಸಲಾಗಿದೆ. ಜಾಮೀನು ಅರ್ಜಿ ಸ್ವೀಕರಿಸಿದ ಕೋರ್ಟ್, ನಾಳೆ ತಕರಾರು ಸಲ್ಲಿಸುವ ದಿನಾಂಕ ನಿಗದಿ ಪಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಇನ್ನೂ, ಮುರುಘಾ ಮಠದಲ್ಲಿ ಫೋಟೋಗಳು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ವಶದಲ್ಲಿರುವ ಮಠದ ಮಾಜಿ ಆಡಳಿತಾಧಿಕಾರಿ, ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಬೆಂಬಲಿಗರ ಮೂಲಕ ಕಾಂಗ್ರೆಸ್ ಟಿಕೆಟ್ಗೆ ಅರ್ಜಿಯನ್ನು ಕೆಪಿಸಿಸಿ ಕಚೇರಿಗೆ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ 2 ಲಕ್ಷ ರೂ. ಬಿಲ್ಡಿಂಗ್ ಫಂಡ್ ನೀಡಿ ಟಿಕೆಟ್ಗೆ ಅರ್ಜಿ ಹಾಕಿದ್ದಾರೆ.
ಎಸ್.ಕೆ. ಬಸವರಾಜನ್ 2008ರಲ್ಲಿ ಜೆಡಿಎಸ್ನಿಂದ ಚಿತ್ರದುರ್ಗ ಶಾಸಕರಾಗಿದ್ದರು. ಅದಾದ ಬಳಿಕ 2013ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸೋತಿದ್ದು, 2018ರಲ್ಲಿ ಎಸ್.ಕೆ ಬಸವರಾಜನ್ ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಇದೀಗ 2023ಕ್ಕೆ ಕಾಂಗ್ರೆಸ್ ಅಭ್ಯರ್ಥಿಯ ಆಕಾಂಕ್ಷಿಯಾಗಿದ್ದಾರೆ.