ಬೆಂಗಳೂರು : ಕಳ್ಳೆಕಾಯ್…ಕಳ್ಳೆಕಾಯ್..ಈ ಸೌಂಡ್ ಕೇಳಿದಾಗ ನೆನಪಾಗೋದೆ ನಮ್ಮ ಬೆಂಗಳೂರಿನಲ್ಲಿ ನಡೆಯುವ ಅದ್ದೂರಿ ಕಡಳೆಕಾಯಿ ಪರೀಷೆ.. ಬೆಂಗಳೂರಿನ ಐತಿಹಾಸಿಕ ಬಸವನ ಕಳ್ಳೆಕಾಯ್ ಪರಿಪೆಗಾಗಿ ಬೆಂಗಳೂರು ಜನರು, ಬೆಂಗಳೂರಿನ ಸುತ್ತಲಿನ ಜಿಲ್ಲೆಗಳ ಜನರು ಬಹು ಆಸಕ್ತಿಯಿಂದ ವರ್ಷಪೂರ್ತಿ ಕಾಯುತ್ತಿದ್ದು, ಈ ಭಾರೀ ನವೆಂಬರ್ 20ರ ಸಂಜೆಯೇ ಚಾಲನೆ ದೊರಕಲಿದ್ದು, ಮೂರು ದಿನಗಳ ಪರಿಷೆ ನಡೆಯಲಿದೆ
ಕಡೇ ಕಾರ್ತಿಕದ ಸೋಮವಾರ ಕಡಲೆಕಾಯಿ ಪರಿಷೆ ನಡೆಯಲಿದೆ. ಶನಿವಾರವೇ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಕಾರಣ ಪೂರ್ವ ಸಿದ್ಧತೆಗಳನ್ನು ಮಾಡಕೊಳ್ಳಲಾಗುತ್ತಿದೆ. ಭಾನುವಾರ ಸಂಜೆ ಪರಿಷೆಗೆ ಚಾಲನೆ ನೀಡಿ ಸೋಮವಾರದಿಂದ ಜನರು ಯಾವುದೇ ತೊಡಕುಗಳಿಲ್ಲದೆ ಕಡಲೆಕಾಯಿ ಪರಿಷೆಯನ್ನು ಕಣ್ತುಂಬಿಕೊಳ್ಳುವಂತೆ ಮಾಡಲು ಅಧಿಕಾರಿಗಳು ಸಜ್ಜಾಗಿದ್ದಾರೆ.
ಪರಿಷೆಯಲ್ಲಿ ದೊಡ್ಡ ಪ್ರಮಾಣದಲ್ಲಿ ರೈತರ ಭಾಗಿ ನಿರೀಕ್ಷೆ ಕಡಲೆಕಾಯಿ ಪರಿಷೆ ಕೆಲವರಿಗೆ ಒಂದು ಜಾತ್ರೆಯ ಸಂಭ್ರಮವನ್ನು ನೀಡಿದರೆ, ರೈತರಿಗೆ ಇದೊಂದು ಪೂಜಾ ಸ್ಥಳ. ತಮ್ಮ ದೇವರಿಗೆ ನೈವೇದ್ಯ ಅರ್ಪಿಸುವಂತೆ ದೊಡ್ಡಬಸವಣ್ಣನಿಗೆ, ನಂದಿಗೆ ಕಡಲೆಕಾಯಿ ಅಭಿಷೇಕ ಮಾಡಿ ಸಂಭ್ರಮಿಸುತ್ತಾರೆ. ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು, ಕಡಲೆಕಾಯಿ ಬೆಳೆ ಕೂಡಾ ಉತ್ತಮವಾಗಿದೆ. ಹೀಗಾಗಿ ಕನಕಪುರ, ರಾಮನಗರ, ಮಾಗಡಿ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಮತ್ತಿತರ ಜಿಲ್ಲೆಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಇದರ ಜೊತೆಗೆ ಬಗೆ ಬಗೆಯ ಕಡಲೆಕಾಯಿ ಪರಿಷೆಗೆ ಬರಲಿವೆ.
ಬಸವನಗುಡಿ ಪರಿಷೆಯಲ್ಲಿ ಈ ಬಾರಿ ಮತ್ತೆ ತೆಪ್ಪೋತ್ಸವ ಆರಂಭವಾಗಲಿದೆ. ಇದು ಪರಿಷೆಯ ಆಕರ್ಷಣೆಯೂ ಆಗಲಿದೆ. ಇದರ ಜೊತೆಗೆ ಬ್ಯೂಗಲ್ ರಾಕ್ ಮತ್ತು ನರಸಿಂಹಸ್ವಾಮಿ ಉದ್ಯಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 2008ರಲ್ಲ ಕೆಂಪಾಂಬುಧಿ ಕೆರೆಯಲ್ಲಿ ನಡೆದಿದ್ದ ನಂದಿ ತೆಪ್ಪೋತ್ಸವ ಬಳಿಕ ನಾನಾ ಕಾರಣಗಳಿಂದ ನಡೆಸಿರಲಿಲ್ಲ. ಈ ಬಾರಿ ಮತ್ತೆ ಅದು ಆರಂಭವಾಗುತ್ತಿದೆ. ಇದು ಪರಿಷೆಗೆ ಹೊಸ ಮೆರಗು ನೀಡಲಿದೆ. ತೆಪ್ಪೋತ್ಸವಕ್ಕೆ ಈಗಾಗಲೇ ಸಿದ್ಧತೆ ನಡೆಯುತ್ತಿದ್ದು, ಕೆರೆಯಲ್ಲಿನ ಪಾಚಿ, ತ್ಯಾಜ್ಯವನ್ನು ಹೊರಹಾಕಲಾಗುತ್ತಿದೆ.
ಪರಿಷೆಗಾಗಿ ಬಸವನಗುಡಿಯಲ್ಲಿ ಸ್ವಚ್ಛತಾ ಕೆಲಸ ಆರಂಭವಾಗಿದೆ. ಪಾದಚಾರಿ ಮಾರ್ಗಗಳ ಮೇಲೆ ಈಗಾಗಲೇ ಅಂಗಡಿ ಮಳಿಗೆಗಳನ್ನು ತೆರಯಲಾಗುತ್ತಿದೆ. ದಾರಿಗಳನ್ನು ಕ್ಲೀನ್ ಮಾಡಿ ಮಳಿಗೆ ಹಾಕುವ ಕಾರ್ಯ ನಡೆಯುತ್ತಿದೆ. ಪರಿಷೆ ಆರಂಭವಾಗುವ ಮುನ್ನವೇ ಕಡಲೆಕಾಯಿ ವ್ಯಾಪಾರ ಶುರುವಾಗಿಬಿಡುತ್ತದೆ. ಪರಿಷೆಯಲ್ಲಿ ಬಣ್ಣ – ಬಣ್ಣದ ಆಟಿಕೆ, ರುಚಿ ರುಚಿಯಾದ ಕಡಲೆ ಕಾಯಿ, ಜಾತ್ರೆ ತಿನಿಸುಗಳು, ಪೀಪಿ, ಬಲೂನ್ಗಳು, ಕಲರ್ಪೂಲ್ ಲೈಟಿಂಗ್ನಲ್ಲಿ ಬಸವನಗುಡಿ ಕಂಗೊಳಿಸುತ್ತದೆ. ಹಳ್ಳಿಗಾಡಿನ ವಾತಾವರಣ ನಿಮ್ಮನ್ನು ಮತ್ತಷ್ಟು ಸೆಳೆಯುತ್ತದೆ. ಈ ಬಾರಿಯ ಪರಿಷೆಯಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಮಳಿಗೆಗಳು ತೆರೆಯುವ ಸಾಧ್ಯತೆಯಿದೆ.