ನವದೆಹಲಿ: ಸಾಮಾಜಿಕ ಜಾಲತಾಣ ಕಂಪನಿಗಳಾದ ಮೆಟಾ (Meta) ಹಾಗೂ ಟ್ವಿಟರ್ (Twitter) ಬೆನ್ನಲ್ಲೇ ಇದೀಗ ಅಮೆರಿಕದ ಟೆಕ್ ಮತ್ತು ಇ-ಕಾಮರ್ಸ್ ಕಂಪನಿ ಅಮೆಜಾನ್ (Amazon) ಕೂಡ ಉದ್ಯೋಗಿಗಳನ್ನು ವಜಾಗೊಳಿಸಲು ಆರಂಭಿಸಿದೆ ಎಂದು ವರದಿಯಾಗಿದೆ.
ಆರ್ಥಿಕ ಕುಸಿತದ ಈ ಸಂದರ್ಭದಲ್ಲಿ ಕಂಪನಿಗೆ ಲಾಭದಾಯಕವಾಗಿರದ ಉಪಕ್ರಮಗಳನ್ನು ತಡೆಹಿಡಿಯಬೇಕಾದ ಅನಿವಾರ್ಯತೆ ಇದೆ ಎಂದು ಅಮೆಜಾನ್ ಹೇಳಿದೆ. ನೇಮಕಾತಿ ಪ್ರಕ್ರಿಯೆಯನ್ನು ಸದ್ಯಕ್ಕೆ ತಡೆಹಿಡಿದಿರುವುದಾಗಿ ಕಳೆದ ವಾರವಷ್ಟೇ ಅಮೆಜಾನ್ ಘೋಷಿಸಿತ್ತು.
ತಮ್ಮನ್ನು ಕಂಪನಿ ಕೆಲಸದಿಂದ ವಜಾಗೊಳಿಸಿದೆ ಎಂದು ಅಮೆಜಾನ್ ಉದ್ಯೋಗಿ, ಸಾಫ್ಟ್ವೇರ್ ಎಂಜಿನಿಯರ್ ಜೇಮಿ ಝಾಂಗ್ ಎಂಬವರು ಲಿಂಕ್ಡ್ಇನ್ನಲ್ಲಿ ಸಂದೇಶ ಪ್ರಕಟಿಸಿದ್ದಾರೆ. ಅಮೆಜಾನ್ ರೋಬೊಟಿಕ್ಸ್ ಎಐನಲ್ಲಿ ನನ್ನ ಒಂದೂವರೆ ವರ್ಷದ ಉದ್ಯೋಗ ಮುಕ್ತಾಯಗೊಂಡಿದೆ. ಅಚ್ಚರಿಯ ವಜಾದೊಂದಿಗೆ ಉದ್ಯೋಗ ಕೊನೆಗೊಂಡಿದೆ. ನಮ್ಮ ಇಡೀ ರೋಬೊಟಿಕ್ಸ್ ತಂಡವನ್ನೇ ವಜಾಗೊಳಿಸಲಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ. ಲಿಂಕ್ಡ್ಇನ್ ಮಾಹಿತಿ ಪ್ರಕಾರ ಅಮೆಜಾನ್ನ ರೋಬೊಟಿಕ್ಸ್ ತಂಡದಲ್ಲಿ 3,766 ಉದ್ಯೋಗಿಗಳಿದ್ದಾರೆ. ವಾಸ್ತವದಲ್ಲಿ ಎಷ್ಟು ಉದ್ಯೋಗಿಗಳು ಇದ್ದಾರೆ ಎಂಬುದನ್ನು ಇನ್ನಷ್ಟೇ ದೃಢಪಡಿಸಿಕೊಳ್ಳಬೇಕಿದೆ ಎಂದು ‘ಬ್ಯುಸಿನೆಸ್ ಟುಡೇ’ ವರದಿ ಮಾಡಿದೆ.
ಉದ್ಯೋಗಿಗಳ ವಜಾ ಕುರಿತಾಗಿ ಅಮೆಜಾನ್ನಿಂದ ಅಧಿಕೃತ ಪ್ರತಿಕ್ರಿಯೆಗಾಗಿ ಕಾಯಲಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಲಾಭದಾಯಕವಲ್ಲದ ಘಟಕಗಳಲ್ಲಿ ಕೆಲಸ ಮಾಡುವವರು ಬೇರೆ ಉದ್ಯೋಗ ಹುಡುಕಿಕೊಳ್ಳುವಂತೆ ಅಮೆಜಾನ್ ಸೂಚಿಸಿತ್ತು. ಯಾಕೆಂದರೆ ಯಾವುದೇ ಕ್ಷಣದಲ್ಲಿ ಅವರ ಪ್ರಾಜೆಕ್ಟ್ಗಳು ಕೊನೆಗೊಳ್ಳುವ ಸಾಧ್ಯತೆ ಇದೆ ಎಂದು ‘ವಾಲ್ಸ್ಟ್ರೀಟ್ ಜರ್ನಲ್’ ಕಳೆದ ವಾರ ವರದಿ ಮಾಡಿತ್ತು.
ಸಾಮಾಜಿಕ ಮಾಧ್ಯಮಗಳಾದ ಫೇಸ್ಬುಕ್, ಇನ್ಸ್ಟಾಗ್ರಾಂ, ವಾಟ್ಸ್ಆ್ಯಪ್ ಒಡೆತನ ಹೊಂದಿರುವ ಮೆಟಾ ಕಂಪನಿ ಕೆಲವ ದಿನಗಳ ಹಿಂದಷ್ಟೇ 11,000 ಮಂದಿಯನ್ನು ಉದ್ಯೋಗದಿಂದ ವಜಾಗೊಳಿಸಿದೆ. ಅದಕ್ಕೂ ಮುನ್ನ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟರ್ನಿಂದ 3,500ಕ್ಕೂ ಹೆಚ್ಚು ಮಂದಿಯನ್ನು ವಜಾಗೊಳಿಸಲಾಗಿತ್ತು. ಅದಕ್ಕೂ ಮುನ್ನ ಟೆಕ್ ದೈತ್ಯ ಮೈಕ್ರೋಸಾಫ್ಟ್ ಸುಮಾರು 1,000 ಉದ್ಯೋಗಿಗಳನ್ನು ವಜಾಗೊಳಿಸಿತ್ತು.
ಬಹುರಾಷ್ಟ್ರೀಯ ಕಂಪನಿಗಳಲ್ಲಿರುವ ತಾಂತ್ರಿಕ ಮತ್ತು ನೆರವು ವಿಭಾಗಗಳ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿ ಹೆಚ್ಚಾಗಿದೆ. ಆರ್ಥಿಕ ಹಿಂಜರಿತ, ಆರ್ಥಿಕ ಕುಸಿತ, ಆರ್ಥಿಕ ಸ್ಥಗಿತದ ಭೀತಿ ಎಲ್ಲೆಡೆ ವ್ಯಕ್ತವಾಗುತ್ತಿದ್ದು, ಆದಾಯ ಕುಂಠಿತಗೊಳ್ಳಬಹುದು ಎಂಬ ಭೀತಿಯಲ್ಲಿರುವ ಟೆಕ್ ಕಂಪನಿಗಳು ಎಚ್ಚರಿಕೆಯ ಹೆಜ್ಜೆ ಇಡುತ್ತಿವೆ ಎಂದು ಮೂಲಗಳು ಹೇಳಿವೆ.