ಕಲ್ಬುರ್ಗಿ : ರಾಜ್ಯದಲ್ಲಿ ಒಂದೇ ವರ್ಷದಲ್ಲಿ 8000 ಶಾಲಾ ಕೊಠಡಿಗಳ ನಿರ್ಮಾಣ, 4000 ಹೊಸ ಅಂಗನವಾಡಿಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕಲಬುರಗಿ ತಾಲ್ಲೂಕಿನ ಮಡಿಹಾಳ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಿವೇಕ ಶಾಲಾ ಕೊಠಡಿಗಳ ಯೋಜನೆಯ ಶಂಕುಸ್ಥಪನೆ ನೆರವೇರಿಸಿ ಮಾತನಾಡಿ, ಕಲ್ಯಾಣ ಕರ್ನಾಟಕದ ಪ್ರತಿ ಕ್ಷೇತ್ರದಲ್ಲಿ 50 ಶಾಲಾಕೊಠಡಿಗಳಂತೆ ಒಟ್ಟು 2000 ಶಾಲಾ ಕೊಠಡಿಗಳನ್ನು ಇದೇ ವರ್ಷದಲ್ಲಿ ನಿರ್ಮಿಸಲಾಗುವುದು. ಕಲ್ಯಾಣ ಕರ್ನಾಟಕ ಭಾಗದಲ್ಲಿ1060 ಕೊಠಡಿಗಳು ಮಂಜೂರಾಗಿದ್ದು, 900 ಕೊಠಡಿಗಳ ನಿರ್ಮಾಣಕ್ಕೆ ತಕ್ಷಣ ಮಂಜೂರಾತಿ ನೀಡಲಾಗುವುದು .ಒಂದೇ ವರ್ಷದಲ್ಲಿ 7600 ಶಾಲಾ ಕೊಠಡಿಗಳ ನಿರ್ಮಾಣದ ಯೋಜನೆಯನ್ನು ಯಾವುದೇ ಸರ್ಕಾರದ ಅವಧಿಯಲ್ಲಿ ಆಗರಲಿಲ್ಲ. ಶಾಲೆಗಳಿಗೆ ದೊಡ್ಡ ಪ್ರಮಾಣದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಈ ಯೋಜನೆಗೆ ನಮ್ಮ ಸರ್ಕಾರ ಪ್ರಾರಂಭಿಸಿದೆ. 8000 ಶಾಲಾ ಕೊಠಡಿಗಳ ನಿರ್ಮಾಣದ ಗುರಿಯಿದ್ದು, ಮುಂದಿನ ಎರಡು ಮೂರು ವರ್ಷಗಳಲ್ಲಿ ಇದೇ ಯೋಜನೆಯನ್ನು ಅನುಷ್ಠಾನಗೊಳಿಸುವ ಮೂಲಕ ರಾಜ್ಯದಲ್ಲಿ ಶಾಲಾ ಕೊಠಡಿಗಳ ಕೊರತೆಯನ್ನು ನೀಗಿಸಿದಂತಾಗುತ್ತದೆ. ಈ ದೂರದೃಷ್ಟಿಯ ಯೋಜನೆಯನ್ನು ಯಾವುದೇ ಸರ್ಕಾರ ಬಂದರೂ ನಿಲ್ಲಿಸಲು ಸಾಧ್ಯವಿಲ್ಲ. ಮುಂದಿನ ಅವಧಿಯಲ್ಲಿಯೂ ಭಾಜಪ ಸರ್ಕಾರವೇ ಬರುವ ವಿಶ್ವಾಸ ನಮಗಿದೆ ಎಂದು ತಿಳಿಸಿದರು.
ಈ ವರ್ಷ ರಾಜ್ಯದಲ್ಲಿ 4000 ಹೊಸ ಅಂಗನವಾಡಿಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ ತಲಾ 15 ಲಕ್ಷ ರೂ.ನಂತೆ ಅನುದಾನವನ್ನು ನೀಡಲಾಗಿದ್ದು, ಈ ಯೋಜನೆಯಡಿ 1500 ಅಂಗನವಾಡಿಗಳನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಇದು ಯಾವುದೇ ಸರ್ಕಾರದ ಸಾಧನೆಗಿಂತ, ರಾಜ್ಯದ ಮಕ್ಕಳ ಭವಿಷ್ಯ ಅಡಗಿದೆ. ಮಕ್ಕಳ ಪ್ರತಿಭೆಯಿಂದ ನಾಡನ್ನು ಕಟ್ಟಬಹುದಾಗಿದ್ದು, ಒಂದು ನಾಡು ಸಮೃದ್ಧಿಯಾಗಬೇಕಾದರೆ ಶಿಕ್ಷಣ ಬಹಳ ಮುಖ್ಯ. ಹೆಣ್ಣುಮಕ್ಕಳಿಗೆ ಪ್ರಾಥಮಿಕ ಶಾಲೆಯ ನಂತರ ಶಿಕ್ಷಣಕ್ಕೆ ಅವಕಾಶ ನೀಡುವುದಿಲ್ಲ. ರೈತಮಕ್ಕಳಿಗೆ, ಕೂಲಿಕಾರರ, ಮೀನುಗಾರರ, ನೇಕಾರರ, ತಾಂಡಾಗಳ ಮಕ್ಕಳು ಆರ್ಥಿಕ ಸಂಕಷ್ಟದಿಂದ ಶಿಕ್ಷಣದಿಂದ ವಂಚಿತರಾಗುವುದನ್ನು ತಪ್ಪಿಸಲು ಸರ್ಕಾರ ಎಲ್ಲ ಯೋಜನೆಗಳಲ್ಲಿ ಹೆಣ್ಣುಮಕ್ಕಳಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿದೆ. 30 ಸಾವಿರ ಕೋಟಿಗೂ ಹೆಚ್ಚಿನ ಯೋಜನೆಯನ್ನು ಹೆಣ್ಣುಮಕ್ಕಳಿಗೆ ಮೀಸಲಿರಿಸಲಾಗಿದೆ. ಶಿಕ್ಷಣ, ಆರೋಗ್ಯ, ತಾಯಿ ಮಗು ಆರೋಗ್ಯ, ಉದ್ಯೋಗ ರಂಗಗಳಿಗೆ ಪ್ರಾಶಸ್ತ್ಯ ನೀಡಲಾಗಿದೆ ಎಂದರು.
ಶಾಲಾ ಕಟ್ಟಡದ ದುರಸ್ತಿಗೆ 200 ಕೋಟಿ ರೂ
ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ ಸರ್ವಶಿಕ್ಷಣ ಅಭಿಯಾನವನ್ನು ಮಾಡಲಾಯಿತು. ಹತ್ತು ವರ್ಷದ ಕಾರ್ಯಕ್ರಮವನ್ನು 2012 ವರೆಗೂ ಈ ಯೋಜನೆಯನ್ನು ವಿಸ್ತರಿಸಲಾಯಿತು. 2019ವರೆಗೂ ಇಡೀ ರಾಜ್ಯದಲ್ಲಿ ಶಾಲಾ ಕೊಠಡಿಗಳ ನಿರ್ಮಾಣವಾಗಲಿಲ್ಲ. ಸುವ್ಯವಸ್ಥಿತ ಶಾಲಾಕೊಠಡಿಗಳ ನಿರ್ಮಾಣದ ಮಹತ್ವವನ್ನು ಮನಗಂಡ ನಮ್ಮ ಸರ್ಕಾರ ಇದಕ್ಕೆ ಪ್ರತ್ಯೇಕ ಅನುದಾನವನ್ನು ಮೀಸಲಿರಿಸಿತು. ಶಾಲಾ ಕಟ್ಟಡದ ದುರಸ್ತಿಗೂ 200 ಕೋಟಿ ರೂ.ಗಳನ್ನು ನೀಡಲಾಗಿದೆ ಎಂದರು.
ಮುಂದಿನ ಆಗಸ್ಟ್ 15 ರೊಳಗೆ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ
ಶಾಲಾಮಕ್ಕಳಿಗೆ ಅದರಲ್ಲೂ ಹೆಣ್ಣುಮಕ್ಕಳಿಗೆ ಶಾಲೆಗಳಲ್ಲಿ ಶೌಚಾಲಯ ಇಲ್ಲದೇ ಆಗುತ್ತಿರುವ ಸಮಸ್ಯೆಯನ್ನು ಸರ್ಕಾರ ಪರಿಗಣಿಸಿ, ಮುಂದಿನ ಆಗಸ್ಟ್ 15 ರೊಳಗೆ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸುವ ಯೋಜನೆಯನ್ನು ಸಧ್ಯದಲ್ಲಿಯೇ ಪ್ರಾರಂಭಿಸಲಾಗುವುದು. ಮಕ್ಕಳ ಶಿಕ್ಷಣದಲ್ಲಿ ಅಂಗನವಾಡಿಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂದರು.
ರಾಜ್ಯದ ಇತಿಹಾಸದಲ್ಲಿ ದಾಖಲೆ
ಮಾತಿನಲ್ಲಿ ಶಿಕ್ಷಣ, ಉದ್ಯೋಗ, ಸ್ವಾವಲಂಬನೆಯ ಬದುಕು ಸಾಧ್ಯವಾಗುವುದಿಲ್ಲ. ವಿಶೇಷ ಕಾರ್ಯಕ್ರಮಗಳನ್ನು ರೂಪಿಸಬೇಕು. ಗುರಿ ಇರಬೇಕು, ಕಾಲ ನಿಗದಿ ಮಾಡಿ ಅನುದಾನ ಬಿಡುಗಡೆ ಮಾಡಿ ಅಧಿಕಾರಿಗಳಿಗೆ ಕೆಲಸಕ್ಕೆ ಹಚ್ಚಬೇಕು. ಈ ವರ್ಷದ ಬಜೆಟ್ಟಿನ ಎಲ್ಲಾ ಘೋಷಣೆಗಳ ಅನುಷ್ಠಾನ ಪ್ರಾರಂಭವಾಗಿದೆ. ರಾಜ್ಯದ ಇತಿಹಾಸದಲ್ಲಿ ಇದು ಒಂದು ದಾಖಲೆ. ಎಲ್ಲರಿಗೂ ಸ್ಪಂದಿಸುವ ಕೆಲಸವಾಗುತ್ತಿದೆ. 32 ಸಾವಿರ ಅತಿಥಿ ಪ್ರಾಧ್ಯಾಪಕರನ್ನು ವರ್ಷದ ಪ್ರಾರಂಭದಲ್ಲಿಯೇ ನೇಮಿಸಲು ಅನುಮತಿ ನೀಡಲಾಯಿತು. ಅವರ ಗೌರವಧನವನ್ನು ಹೆಚ್ಚಿಸಲಾಯಿತು. 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದರು.
ಶಿಕ್ಷಣಕ್ಕೆ ಅತಿ ಹೆಚ್ಚಿನ ಮಹತ್ವ
ಮುಂದಿನ ಶೈಕ್ಷಣಿಕ ವರ್ಷಕ್ಕೆ ಅಗತ್ಯವಿರುವ ಶಿಕ್ಷಕರ ಸಂಖ್ಯೆಯನ್ನು ನೀಡಿದರೆ, ಮುಂದಿನ ಬಜೆಟ್ ನಲ್ಲಿ ಅದಕ್ಕೂ ಅನುಮತಿ ಒದಗಿಸುವುದಾಗಿ ಶಿಕ್ಷಣ ಸಚಿವರಿಗೆ ತಿಳಿಸಿದ್ದೇನೆ. ಶಿಕ್ಷಣಕ್ಕೆ ಅತಿ ಹೆಚ್ಚಿನ ಮಹತ್ವವನ್ನು ನಮ್ಮ ಸರ್ಕಾರ ನೀಡಿದೆ. ಬರುವ ವರ್ಷದಲ್ಲಿ ಯೋಗವನ್ನು ಶಾಲೆಗಳಲ್ಲಿ ಪ್ರಾರಂಭಿಸಲಾಗುವುದು. 100 ಹೊಸ ಪ್ರೌಢಶಾಲೆ ಹಾಗೂ 100 ಹೊಸ ಪದವಿಪೂರ್ವ ಕಾಲೇಜುಗಳನ್ನು ಪ್ರಾರಂಭಿಸಲು ಮಂಜೂರಾತಿಯನ್ನು ನೀಡಲಾಗಿದೆ. ಕಲ್ಯಾಣ ಕರ್ನಾಟಕ ನಿಜವಾಗಲೂ ಕಲ್ಯಾಣದ ನಾಡಾಗಬೇಕು ಎಂದರು.
ಅಭಿವೃದ್ಧಿಗೆ ವೇಗ
ಆರೋಗ್ಯ ಕ್ಷೇತ್ರದಲ್ಲಿಯೂ 67 ಪಿ. ಹೆಚ್.ಸಿ ಮೇಲ್ದರ್ಜೆಗೇರಿಸಲಾಗುತ್ತಿದೆ ಹಾಗೂ 24 ಪಿಹೆಚ್ಸಿ ಕೇಂದ್ರಗಳನ್ನು ಕಲ್ಯಾಣ ಕರ್ನಾಟಕದಲ್ಲಿಯೇ ನಿರ್ಮಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕ ಮಂಡಳಿಗೆ 3000 ಕೊಟಿ ಒದಗಿಸಲಾಗಿದೆ. ಹಿಂದೇದೂ ಈ ಕೆಲಸ ಆಗಿರಲಿಲ್ಲ. ಮುಂದಿನ ಬಜೆಟ್ ನಲ್ಲಿ 5000 ಕೋಟಿ ರೂ.ಗಳನ್ನು ಮಂಡಳಿಗೆ ಒಗದಿಸುವುದಾಗಿ ಭರವಸೆ ನೀಡಿದರು. ಅಭಿವೃದ್ಧಿಗೆ ವೇಗ ನೀಡಲಾಗುವುದು. ನಿಜವಾದ ಕಲ್ಯಾಣಕರ್ನಾಟಕವನ್ನು ಕಟ್ಟುವುದು ನಮ್ಮ ಸಂಕಲ್ಪ ಎಂದು ತಿಳಿಸಿದರು.
ಕರ್ನಾಟಕದ ಎಲ್ಲಾ ಮಕ್ಕಳೂ ನನ್ನ ಮಕ್ಕಳು
ಕರ್ನಾಟಕದ ಎಲ್ಲಾ ಮಕ್ಕಳೂ ನನ್ನ ಮಕ್ಕಳು ಎಂದು ವಿದೇಶಿಯರೊಬ್ಬರಿಗೆ ಉತ್ತರಿಸಿದ್ದಾಗಿ ತಿಳಿಸಿದ ಮುಖ್ಯಮಂತ್ರಿಗಳು, ಮುಂದಿಟ್ಟ ಹೆಜ್ಜೆಯನ್ನು ಎಂದೂ ಹಿಂದಿಡಬೇಡಿ. ಸೋಲಬಾರದೆಂದು ಆಡವಾಡುವುದು ಹಾಗೂ ಗೆಲ್ಲಬೇಕು ಎಂದು ಆಟವಾಡಬೇಕು ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು. ಜೀವನದಲ್ಲಿ ಗೆಲ್ಲಬೇಕೆಂದು ಆಟವಾಡಬೇಕು. ನಿಮ್ಮ ಸಣ್ಣ ವಯಸ್ಸಿನಲ್ಲಿಯೂ ದೊಡ್ಡ ಕನಸನ್ನು ಕಾಣಬೇಕು ಎಂದರು. ಕಲ್ಪನೆಗಳಿಗೆ ರೆಕ್ಕೆ ಕೊಡಿ. ಕನಸು ನನಸು ಮಾಡಿಕೊಳ್ಳಲು ಪ್ರಯತ್ನಿಸಿ ಎಂದರು. ಎಲ್ಲವನ್ನೂ ಪ್ರಶ್ನಿಸುವ ತಾರ್ಕಿಕ ಮನೋಭಾವ, ಚಿಂತನೆ ಅಗತ್ಯ. ನೈತಿಕ ಬಲದಿಂದ ಮಕ್ಕಳಿಗೆ ಕಲಿಸಬೇಕು. ಪ್ರಗತಿಯ ಮೆಟ್ಟಿಲಲ್ಲಿ ಮಕ್ಕಳು ಎತ್ತರಕ್ಕೆ ಏರಬೇಕು. ಕನ್ನಡದ ಮಕ್ಕಳು ಜಗತ್ತಿನಲ್ಲಿ ಕನ್ನಡದ ಬಾವುಟ ಹಾರಿಸಬೇಕು ಎಂದರು.
ಸಮಾರಂಭದಲ್ಲಿ ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ, ಸಂಸದ ಉಮೇಶ್ ಜಾಧವ್, ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಮೊದಲಾದವರು ಉಪಸ್ಥಿತರಿದ್ದರು.