ಹಾಸನ: ಅಪಾಯದಂಚಿನ ಕೊಣನೂರು ಕಾವೇರಿ ನದಿಯ ತೂಗು ಸೇತುವೆಗೆ ಕೊನೆಗೂ ದುರಸ್ತಿ ನಡೆಸಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ಇಂದಿನಿಂದ ಸಂಚಾರ ಬಂದ್ ಮಾಡಲಾಗಿದೆ
ಜಿಲ್ಲಾಪಂಚಾಯಿತಿಯ ಹೊಯ್ಸಳ ಸಭಾಂಗಣದಲ್ಲಿ ಬುಧವಾರ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಗೊಂಡಿತು.
ಅರಕಲಗೂಡು ಕ್ಷೇತ್ರದ ಶಾಸಕ ಎ.ಟಿ. ರಾಮಸ್ವಾಮಿ ತೂಗುಸೇತುವೆಯ ಸ್ಥಿತಿ ಹಾಗೂ ಸಂಭವಿಸಬಹುದಾದ ಅನಾಹುತದ ಬಗ್ಗೆ ಪ್ರಸ್ತಾಪಿಸಿ, “ದುರಸ್ತಿ ಮಾಡದೆ ನಿರ್ಲಕ್ಷಿಸಿದ್ದೇ ಆದಲ್ಲಿ ಗುಜರಾತ್ನಲ್ಲಿ ಇತ್ತೀಚೆಗೆ ಸಂಭವಿಸಿದ ದುರಂತದಂತೆ ಇಲ್ಲಿಯೂ ಸಂಭವಿಸುವ ಸಾಧ್ಯತೆ ಇರುತ್ತದೆ,” ಎಂದು ಎಚ್ಚರಿಸಿದರು.
ಸಮಸ್ಯೆ ಅರಿತ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ, “ನಿರ್ಲಕ್ಷ್ಯ ತೋರಿ ಅನಾಹುತ ಸಂಭವಿಸಿದರೆ ಅದಕ್ಕೆ ಎಂಜಿನಿಯರ್ಗಳನ್ನೇ ಹೊಣೆ ಮಾಡಲಾಗುವುದು,” ಎಂದು ಎಚ್ಚರಿಸಿದ ಪರಿಣಾಮ ಸಮಸ್ಯೆ ಗಂಭೀರತೆ ಪಡೆಯಿತು.
ಏನಿದು ಸಮಸ್ಯೆ?: ಕಾವೇರಿ ನದಿಗೆ ಅಡ್ಡಲಾಗಿ ಕೊಣನೂರು-ಕಟ್ಟೇಪುರಕ್ಕೆ ಸಂಪರ್ಕ ಕಲ್ಪಿಸಲು 1999-2000ನೇ ಸಾಲಿನಲ್ಲಿ ಜಿಲ್ಲಾಪಂಚಾಯಿತಿಯಿಂದ 30 ಲಕ್ಷ ರೂ. ಅನುದಾನದಲ್ಲಿ ಆರಂಭವಾದ ಕಾಮಗಾರಿ 2003ರಲ್ಲಿ ಪೂರ್ಣಗೊಂಡು ಸಾರ್ವಜನಿಕ ಬಳಕೆಗೆ ಲೋಕಾರ್ಪಣೆಗೊಳಿಸಲಾಗಿತ್ತು. ಸುದೀರ್ಘ 19 ವರ್ಷಗಳಲ್ಲಿ ಲಕ್ಷಾಂತರ ಜನ ತೂಗುಸೇತುವೆ ಮೇಲೆ ಸಂಚರಿಸಿದ್ದಾರೆ. ಇಂದಿಗೂ ಸೇತುವೆ ಬಳಕೆಯಲ್ಲಿದೆ. ಕೊಣನೂರು ಹೋಬಳಿ ಕೇಂದ್ರಕ್ಕೆ ಕಣಕಟ್ಟ ಮತ್ತು ಸುತ್ತಲಿನ 10ಕ್ಕೂ ಹೆಚ್ಚು ಗ್ರಾಮದ ಜನರು, ವಿದ್ಯಾರ್ಥಿಗಳು ಒಂದು ಕಿ.ಮೀ. ಕಾಲ್ನಡಿಗೆಯಲ್ಲಿ ಬಂದು ತಲುಪಲು ತೂಗು ಸೇತುವೆ ಸಹಕಾರಿಯಾಗಿದೆ.
ಈ ತೂಗುಸೇತುವೆ ನಿರ್ಮಾಣಕ್ಕೆ ಮುನ್ನ 12 ಕಿ.ಮೀ. ಸುತ್ತಿ ಬರಬೇಕಿತ್ತು. ಆದರೆ ಈ ಸೇತುವೆ ಈಗ ಅಪಾಯದಂಚಿಗೆ ತಲುಪಿದೆ. ಕಾವೇರಿ ನದಿ ಮಳೆಯಿಂದಾಗಿ ತುಂಬಿ ತುಳುಕುತ್ತಿದೆ. ಇದರ ಮೇಲಿನ ತೂಗು ಸೇತುವೆಯಲ್ಲಿ ಹಗಲಿರುಳು ಸಾವಿರಾರು ಜನ ಇಂದಿಗೂ ಓಡಾಡುತ್ತಾರೆ. ಅಷ್ಟೇ ಅಲ್ಲ, ತೂಗು ಸೇತುವೆ ಮೇಲೆ ಫೋಟೊಶೂಟ್ ಸಹ ಆಗಾಗ್ಗೆ ನಡೆಯುತ್ತಿರುತ್ತವೆ.
ಈ ಭಾಗದಲ್ಲಿ ಪ್ರವಾಸಕ್ಕೆ ಬರುವವರು ತೂಗು ಸೇತುವೆ ವೀಕ್ಷಿಸಲು ಆಗಮಿಸುತ್ತಾರೆ. ಇಂತಹ ಸಂದರ್ಭದಲ್ಲಿ ಅನಾಹುತ ಸಂಭವಿಸಿ ಆಗಬಹುದಾದ ಸಾವು, ನೋವಿಗೆ ಯಾರು ಹೊಣೆ ಕೆಲ ಮಾಧ್ಯಮಗಳಲ್ಲಿ ಬಹಿರಂಗವಾಗಿತ್ತು.
ಕಾವೇರಿ ನದಿಯ ದೃಶ್ಯವನ್ನು ತೂಗುಸೇತುವೆ ಮೇಲೆ ನಿಂತು ನೋಡುವುದೇ ಮನಮೋಹಕ. ಈ ಕಾರಣದಿಂದ ಮಳೆಗಾಲದ ಹೊರತಾಗಿಯೂ ಪ್ರಕೃತಿ ಪ್ರಿಯರು, ಪ್ರವಾಸಿಗರು, ಅದರಲ್ಲೂ ರಜೆ ದಿನದಲ್ಲಿ ಹೆಚ್ಚಾಗಿ ಆಗಮಿಸುತ್ತಾರೆ. ಹಾಗಾಗಿ ಪ್ರವಾಸಿಗರ, ಪ್ರಕೃತಿ ಪ್ರಿಯರ ಆಕರ್ಷಣೀಯ ತಾಣವಾಗಿಯೂ ಗುರುತಿಸಿಕೊಂಡಿದೆ.
ತೂಗುಸೇತುವೆ 196 ಮೀಟರ್ ಉದ್ದ, 1.30 ಮೀಟರ್ ಅಗಲವಿದ್ದು, ತಡೆಗೋಡೆ, ಫೆನ್ಸಿಂಗ್ ತಂತಿಗಳು, ಕಬ್ಬಿಣದ ರಾಡ್, ಹಗ್ಗ ತುಕ್ಕು ಹಿಡಿದಿದೆ. ತೂಗುಸೇತುವೆ ಮೇಲೆ ನಡೆದು ಹೋಗಲು ಹಾಕಿರುವ ನೆಲಹಾಸು ಕೂಡ ಅಲ್ಲಲ್ಲಿ ಮುರಿದುಹೋಗಿದೆ. ಜಿಪಂ ತೂಗುಸೇತುವೆ ನಿರ್ಮಿಸಿ ಅದರ ನಿರ್ವಹಣೆಯನ್ನು ಗ್ರಾಪಂಗೆ ವಹಿಸಿಕೊಟ್ಟಿದೆ.
ಗ್ರಾಪಂಗೆ ಬರುವ ಆರ್ಥಿಕ ಸಂಪನ್ಮೂಲ ಅತಿ ಕಡಿಮೆ. ಕಡಿಮೆ ಹಣದಲ್ಲಿ ದುಬಾರಿಯ ತೂಗು ಸೇತುವೆ ನಿರ್ವಹಣೆ ಸಾಧ್ಯವಾಗದ ಮಾತು. ಹಾಗಾಗಿ ತೂಗುಸೇತುವೆ ದುರಸ್ತಿ ಕಾಣದಾಗಿತ್ತು. ಇದೀಗ ಸಮಸ್ಯೆ ನಿವಾರಣೆ ಆದಂತಿದ್ದು, ಸೇತುವೆ ಶೀಘ್ರ ದುರಸ್ತಿಯಾಗಿ ಜನರ ಸಂಚಾರಕ್ಕೆ ಮುಕ್ತವಾಗಲಿ ಎಂಬುದು ಜನರ ಒತ್ತಾಯವಾಗಿದೆ.