ಬೆಂಗಳೂರು : ರಾಜ್ಯ ಸರ್ಕಾರವು ಕೋಳಿ ಸಾಕಾಣಿಕೆದಾರರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಕೋಳಿ ಸಾಕಾಣಿಕೆಗಾಗಿ ಉಪಯೋಗಿಸುವ ಕೃಷಿ ಭೂಮಿಯನ್ನು ಭೂ ಪರಿವರ್ತನೆಯಿಂದ ವಿನಾಯಿತಿ ನೀಡಲು ಜಿಲ್ಲಾಧಿಕಾರಿಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಿದೆ.
ಕೃಷಿ ಜಮೀನನ್ನು ಇತರೆ ಉದ್ದೇಶಗಳಿಗೆ ಉಪಯೋಗಿಸುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಕಲಂ 95(2)ರಡಿ ಕಂದಾಯ ವಿಧಿಸಲಾಗಿರುವ ಅಥವಾ ಬೇಸಾಯದ ಉದ್ದೇಶಕ್ಕಾಗಿ ಹೊಂದಿರುವ ಭೂಮಿಯ ಯಾವುದೇ ಅಧಿಭೋಗದಾರನು ಅಂಥ ಭೂಮಿಯನ್ನು ಅಥವಾ ಅದರ ಯಾವುದೇ ಭಾಗವನ್ನು ಯಾವುದೇ ಇತರ ಉದ್ದೇಶಕ್ಕಾಗಿ ಬದಲಿಸಲು ಇಚ್ಛಿಸಿದರೆ ಅವನು ಅನುಮತಿಗಾಗಿ ಜಿಲ್ಲಾಧಿಕಾರಿಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಕಲಂ2-(A)(1)(d) ರಲ್ಲಿ ಕೋಳಿ ಸಾಕಾಣಿಕೆಯನ್ನು ಕೃಷಿ ಎಂದು ವ್ಯಾಖ್ಯಾನಿಸಲಾಗಿರುವುದರಿಂದ ಕೋಳಿ ಸಾಕಾಣಿಕೆಗೆ ಬಳಕೆಯಾಗುವ ಜಮೀನಿಗೆ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 95ರಡಿ ಭೂ ಪರಿವರ್ತನೆಯಿಂದ ವಿನಾಯಿತಿ ನೀಡಲಾಗಿದೆ.