ದಾವಣಗೆರೆ: ರಾಜಕೀಯವಾಗಿ ಬೆಳೆಯುತ್ತಿದ್ದ’ ನನ್ನ ಮಗನ ಸಾವಿಗೆ ನ್ಯಾಯಬೇಕು ಎಂದು ಮೃತ ಚಂದ್ರಶೇಖರ್ (Chandrashekhar) ತಾಯಿ ಅನಿತಾ ಕಣ್ಣೀರಾಕಿದ್ದಾರೆ.
ಮಾಧ್ಯಮಗಳೊಂದಿಗೆ ಜೊತೆ ಮಾತನಾಡಿದ ಅವರು, ನನ್ನ ಮಗನಿಗೆ ಏನು ಮಾಡಿದ್ರೋ ಗೊತ್ತಿಲ್ಲ. ಜೀವಂತವಾಗಿ ಮಗನ ಮುಖವನ್ನ ನಾನು ಮತ್ತು ನನ್ನ ಪತಿ ಸಹ ನೋಡಲಿಲ್ಲ. ಕೊನೆಗೆ ಏನಾಯಿತು ಗೊತ್ತಾಗಲಿಲ್ಲ. ರಾಜಕೀಯವಾಗಿ ಬೆಳೆಯುತ್ತಿದ್ದ ಸಾವಿಗೆ ನ್ಯಾಯ ಬೇಕು ಎಂದು ರೋಧಿಸಿದ್ದಾರೆ.
ಕಳೆದ ಭಾನುವಾರದಿಂದ ಶಾಸಕ ರೇಣುಕಾಚಾರ್ಯ (MP Renukacharya) ತಮ್ಮನ ಮಗ ಚಂದ್ರಶೇಖರ್ ನಾಪತ್ತೆಯಾಗಿದ್ದರು. ಆ ಬಳಿಕದಿಂದ ಎಲ್ಲಾ ಕಡೆ ಚಂದ್ರುಗಾಗಿ ಹುಡುಕಾಟ ನಡೆಸಲಾಯಿತು. ಐದು ದಿನದ ಹಿಂದೆ ನಾಪತ್ತೆಯಾಗಿದ್ದ ಚಂದ್ರಶೇಖರ್ ಶವ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗುರುವಾರ ಮಧ್ಯಾಹ್ನದವರೆಗೂ ಚಂದ್ರು ಅವರನ್ನು ಅಪಹರಣ ಮಾಡಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ಹೊನ್ನಾಳಿ ಮತ್ತು ನ್ಯಾಮತಿ ಮಾರ್ಗಮಧ್ಯೆ ಬರುವ ಸೊರಟೂರಿನ ತುಂಗಭದ್ರಾ ನದಿಯ ಕಾಲುವೆಯಲ್ಲಿ ಕಾರೊಂದು ಇದೆ ಎಂಬ ಸುದ್ದಿ ಇಡೀ ಪ್ರಕರಣಕ್ಕೆ ಟ್ವಿಸ್ಟ್ ನೀಡಿತು.
ಕಾಲುವೆ ಮೇಲ್ಭಾಗದಲ್ಲಿ ಕಾರೊಂದರ ಬಿಡಿಭಾಗಳು ಪತ್ತೆ ಆಗಿದ್ದವು. ನುರಿತ ಈಜುಪಟುಗಳು ಮತ್ತು ಅಗ್ನಿಶಾಮಕ ಪಡೆ ಸಿಬ್ಬಂದಿ ಕಾರ್ಯಾರಚಣೆ ನಡೆಸಿ, ಕಾರನ್ನು ಮೇಲಕ್ಕೆ ಎತ್ತಿದರು. ಕಾರಿನಲ್ಲಿ ಚಂದ್ರಶೇಖರ್ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶಾಸಕ ರೇಣುಕಾಚಾರ್ಯ ಸೇರಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಚಂದ್ರು ನಿನ್ನ ಸಾವಿಗೆ ನಾನೇ ಕಾರಣ. ಚಂದ್ರು ನನ್ನನ್ನು ಕರ್ಕೋಳೋ ಎಂದು ರೇಣುಕಾಚಾರ್ಯ ಗೋಳಾಡಿದ್ದರು