ಕೊಪ್ಪಳ : 2022-23ನೇ ಸಾಲಿನ ಯಶಸ್ವಿನಿ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆಯಡಿ ಅರ್ಹ ಸದಸ್ಯರು ನೋಂದಾಯಿಸುವಂತೆ ಕೊಪ್ಪಳ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಾದ ದಸ್ತಗೀರ ಅಲಿ ಅವರು ತಿಳಿಸಿದ್ದಾರೆ.
ಯಶಸ್ವಿನಿ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆಯು ಶಸ್ತçಚಿಕಿತ್ಸಾ ಯೋಜನೆಯಾಗಿದ್ದು, ಈ ಯೋಜನೆಯಡಿ 2022-2023ನೇ ಸಾಲಿಗೆ ನೋಂದಾಯಿಸಲು ಸರ್ಕಾರವು ಆದೇಶ ಹೊರಡಿಸಿದೆ. ಕರ್ನಾಟಕ ಸೌಹಾರ್ದ ಸಹಕಾರಿ/ ಕರ್ನಾಟಕ ಸಹಕಾರ ಸಂಘದ ಸದಸ್ಯರು ಮತ್ತು ಅವರ ಕುಟುಂಬ ವರ್ಗದವರಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ವತಿಯಿಂದ ಸಂಘಟಿಸಲ್ಪಟ್ಟಿರುವ ಎಲ್ಲಾ ಗ್ರಾಮೀಣ ಸ್ವ-ಸಹಾಯ ಗುಂಪುಗಳ ಸದಸ್ಯರು, ಸಹಕಾರಿ ಮೀನುಗಾರರು ಮತ್ತು ಸಹಕಾರಿ ನೇಕಾರರು ಕೂಡ ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ.
ಗ್ರಾಮೀಣ ಸಹಕಾರ ಸಂಘಗಳ ಕುಟುಂಬ ಸದಸ್ಯರ ಗರಿಷ್ಠ ನಾಲ್ಕು ಜನಕ್ಕೆ ವಾರ್ಷಿಕ ವಂತಿಗೆ ರೂ. 500 ಗಳು, ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರುಳ್ಳ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಶೇ. 20 ರಷ್ಟು ಹೆಚ್ಚುವರಿಯಾಗಿ ಅಂದರೆ, ಪ್ರತಿ ಹೆಚ್ಚುವರಿ ಸದಸ್ಯರಿಗೆ ರೂ. 100 ಗಳನ್ನು ಪಾವತಿಸಬೇಕು. ನಗರ ಸಹಕಾರ ಸಂಘಗಳ ಗರಿಷ್ಠ ನಾಲ್ಕು ಸದಸ್ಯರ ಕುಟುಂಬದ ಜನಕ್ಕೆ ವಾರ್ಷಿಕ ವಂತಿಗೆ ರೂ. 1000 ಗಳು ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರುಳ್ಳ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಶೇ. 20 ರಷ್ಟು ಹೆಚ್ಚುವರಿಯಾಗಿ ಅಂದರೆ, ಪ್ರತಿ ಹೆಚ್ಚುವರಿ ಸದಸ್ಯರಿಗೆ ರೂ. 200 ಗಳನ್ನು ಪಾವತಿಸಬೇಕು. ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಸದಸ್ಯರಿಗೆ ಅವರ ವಾರ್ಷಿಕ ಸದಸ್ಯತ್ವದ ವಂತಿಗೆಯನ್ನು ಸರ್ಕಾರವೇ ಭರಿಸುತ್ತದೆ.
ಸಹಕಾರ ಸಂಘಗಳಲ್ಲಿ ಕುಟುಂಬದ ಒಬ್ಬ ವ್ಯಕ್ತಿ ಸದಸ್ಯನಾಗಿ 3 ತಿಂಗಳು ಗತಿಸಿದ್ದಲ್ಲಿ ಈ ಯೋಜನೆಯಡಿಯಲ್ಲಿ ನೋಂದಾಯಿಸಬಹುದಾಗಿದೆ ಹಾಗೂ ವಯೋಮಿತಿಯ ನಿರ್ಬಂಧವಿರುವುದಿಲ್ಲ. ಈ ಯೋಜನೆಯಡಿ ಯಶಸ್ವಿನಿ ಸದಸ್ಯರುಗಳನ್ನು ನವೆಂಬರ್ 01 ರಿಂದ ಡಿಸೆಂಬರ್ 31-12-2022 ರವರಗೆ ನೋಂದಾಯಿಸಬಹುದಾಗಿದೆ. ಮತ್ತು ಈ ಯೋಜನೆಯ ಸೌಲಭ್ಯ ಪಡೆಯಲು 2023ರ ಜನವರಿ 01 ರಿಂದ 2023ರ ಡಿಸೆಂಬರ್ 31 ರವರೆಗೆ ಜಾರಿಯಲ್ಲಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಎಲ್ಲಾ ವಿವಿಧ ಸಹಕಾರ ಸಂಘಗಳು/ ಸೌಹಾರ್ದ ಸಹಕಾರಿ ಸಂಘಗಳ ಹಾಗೂ ಸಹಕಾರ ಇಲಾಖಾ ಕಛೇರಿಗಳನ್ನು ಖುದ್ದಾಗಿ ಹಾಗೂ ಸಹಕಾರ ಸಂಘಗಳ ಉಪನಿಬಂಧಕರ ಕಛೇರಿ, ಕೊಪ್ಪಳ ದೂ.ಸಂ: 08539-221109 ಮತ್ತು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿ, ಕೊಪ್ಪಳ ದೂ.ಸಂ: 08539-221601 ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.