ಬೆಂಗಳೂರು: ರಾಜ್ಯದಲ್ಲಿ ಪರಿವರ್ತನೆಯ ಯುಗ ಆರಂಭವಾಗಿದೆ. ಕೊಳ್ಳೇಗಾಲದಲ್ಲಿ ಕಾಂಗ್ರೆಸ್ಸಿನ ಭಾರತ್ ಜೋಡೋ ಆರಂಭವಾಗಿತ್ತು. ಅಲ್ಲಿ ಬಿಜೆಪಿ 7ರಲ್ಲಿ 6 ಸ್ಥಾನಗಳನ್ನು ಗೆದ್ದುಕೊಂಡಿದೆ. ರಾಹುಲ್ ಗಾಂಧಿ ಹೋದಲ್ಲೆಲ್ಲ ಕಾಂಗ್ರೆಸ್ ಮುಳುಗುವ ಸಂಕೇತ ಇದೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರು ವಿಶ್ಲೇಷಿಸಿದರು.
ಹಾಸನದಲ್ಲಿ ಇಂದು ಜನಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನ ಪಡೆದು ಮತ್ತೆ ಅಧಿಕಾರ ಪಡೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಅಸೆಂಬ್ಲಿ ಚುನಾವಣೆ ಬಳಿಕ ಸಿದ್ರಾಮಣ್ಣನ ಕುಟುಂಬ, ಬಂಡೆಯ ಕುಟುಂಬ ಮತ್ತು ಗೌಡರ ಕುಟುಂಬ ಸೇರಿ 3 ಕುಟುಂಬದವರು ನಿರುದ್ಯೋಗಿಗಳಾಗುತ್ತಾರೆ ಎಂದು ತಿಳಿಸಿದರು.
ಹಾಸನದ ಗೌಡರು ದೆಹಲಿ ಆಳಿದರು, ರಾಜ್ಯವನ್ನೂ ಆಳಿದರು; ಆದರೆ ಏನು ಮಾಡೋಣ ಕೆಂಪೇಗೌಡರನ್ನು ಮರೆತರು. ಬಿಜೆಪಿ, ಕೆಂಪೇಗೌಡರ ವಿಗ್ರಹವನ್ನು ಸ್ಥಾಪಿಸಿ ಅವರಿಗೆ ಗೌರವ ಕೊಡುವ ಕಾರ್ಯ ಮಾಡುತ್ತಿದೆ ಎಂದು ವಿವರಿಸಿದರು.
ಹಾಸನದಲ್ಲಿ ಕುಟುಂಬವಾದಿಗಳಿರಬೇಕೇ ಅಥವಾ ರಾಷ್ಟ್ರೀಯವಾದಿಗಳಿರಬೇಕೇ ಎಂಬ ಚರ್ಚೆಗಳು ಆರಂಭವಾಗಿವೆÉ. ಕುಟುಂಬ ರಾಜಕಾರಣ ಮಾಡುತ್ತ, ಕುಟುಂಬ ಬೆಳೆಸುತ್ತ, ಕುಟುಂಬದ ಎಲ್ಲರಿಗೆ ಅವಕಾಶ ಕೊಡುತ್ತ ಹಾಗೂ ಕೌಟುಂಬಿಕ ಸ್ಥಾನಮಾನದತ್ತ ಗಮನ ಕೊಡುವ ಪಾರ್ಟಿ ಇಲ್ಲಿದೆ. ಇವತ್ತು ಕಾಂಗ್ರೆಸ್ನ ಹಲವು ಪ್ರಮುಖರು ಬಿಜೆಪಿ ಸೇರಿದ್ದಾರೆ. ಕಾಂಗ್ರೆಸ್ ಪಕ್ಷದ ಹಲವು ಪ್ರಮುಖರು, ಜೆಡಿಎಸ್ನ ಹಲವು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಮುಂದಿನ ಚುನಾವಣೆಯೊಳಗೆ ಅವರೆಲ್ಲರೂ ಬಿಜೆಪಿ ಸೇರಲಿದ್ದಾರೆ ಹಾಗೂ ಬಿಜೆಪಿ ಮತ್ತೆ ಅಧಿಕಾರ ಪಡೆಯಲಿದೆ ಎಂದು ವಿವರಿಸಿದರು.
ಜನನಾಯಕರಾದ ಬಿಎಸ್ ಯಡಿಯೂರಪ್ಪ, ಖಳ ನಾಯಕರಾದ ಸಿದ್ರಾಮಣ್ಣ ಮತ್ತು ಕಣ್ಣೀರ ನಾಯಕ ಕುಮಾರಸ್ವಾಮಿ ಪೈಕಿ ಯಾರು ನಿಮಗೆ ಬೇಕು ಎಂದು ಜನರನ್ನು ಪ್ರಶ್ನಿಸಿದರು. ಒಂದು ಕಾಲಘಟ್ಟದಲ್ಲಿ ಈ ಜಿಲ್ಲೆಯಲ್ಲಿ ನಮ್ಮ ಪಕ್ಷವು ಬಿ.ಬಿ.ಶಿವಪ್ಪ ಅವರ ನೇತೃತ್ವದಲ್ಲಿ 4 ಸ್ಥಾನಗಳನ್ನು ಪಡೆದಿತ್ತು. ಮುಂದಿನ ಚುನಾವಣೆಯಲ್ಲಿ 5ಕ್ಕಿಂತ ಹೆಚ್ಚು ಸ್ಥಾನ ಪಡೆದು ಜನತಾದಳ ಮುಕ್ತ ಜಿಲ್ಲೆಯಾಗಿ ಪರಿವರ್ತಿಸುವ ವಿಶ್ವಾಸವಿದೆ ಎಂದರು.
ಕುಟುಂಬವಾದ, ಪರಿವಾರವಾದ ಹಾಗೂ ಏಕವ್ಯಕ್ತಿಯ ರಾಜಕಾರಣ ಮುಗಿದು ಹೋಗಿದೆ. ಈ ದೇಶದಲ್ಲಿ ಇನ್ನು ರಾಷ್ಟ್ರೀಯವಾದದ ರಾಜಕಾರಣಕ್ಕೆ ಅವಕಾಶ ಸಿಗಲಿದೆ. ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಅಭಿವೃದ್ಧಿಶೀಲ ದೇಶವಾಗಿ ಭಾರತವನ್ನು ಪರಿವರ್ತಿಸಲಾಗುತ್ತಿದೆ. ಈ ದೇಶದಲ್ಲಿ ಪರಿವರ್ತನೆ ಆರಂಭವಾಗಿದೆ; ಜಗತ್ತಿನ ಎಲ್ಲ ದೇಶದವರೂ ನಮ್ಮತ್ತ ನೋಡುತ್ತಿದ್ದಾರೆ ಎಂದು ತಿಳಿಸಿದರು.
60 ವರ್ಷಗಳ ಕಾಲ ದೇಶದ ಆಡಳಿತ ಮಾಡಿದ ಕಾಂಗ್ರೆಸ್ ಪಕ್ಷವು ಈ ದೇಶವನ್ನು ಸಾಲಗಾರರ ರಾಷ್ಟ್ರವಾಗಿ ಮಾಡಿ ತಲೆ ತಗ್ಗಿಸುವ ದೇಶವಾಗಿ ಪರಿವರ್ತಿಸಿತ್ತು. ಪರಿವಾರವಾದ, ಭ್ರಷ್ಟಾಚಾರ, ದೇಶ ವಿಭಜನೆ ಮತ್ತು ಭಯೋತ್ಪಾದನೆಯು ಕಾಂಗ್ರೆಸ್ ಪಕ್ಷದ ಕೊಡುಗೆಗಳು ಎಂದು ಅವರು ಟೀಕಿಸಿದರು.
ಭಾರತವನ್ನು ಅಮೇರಿಕದ ಅಧ್ಯಕ್ಷರು ಮೆಚ್ಚಿಕೊಳ್ಳುತ್ತಾರೆ. ಶ್ರೀಲಂಕಾಕ್ಕೆ ನೆರವಿತ್ತ ದೇಶ ಭಾರತ. ಜಗತ್ತನ್ನು ಒಂದು ಮಾಡಿ ಯುದ್ಧ ನಿಲ್ಲಿಸುವ ತಾಕತ್ತಿರುವ ದೇಶವಾಗಿ ಭಾರತ ಹೊರಹೊಮ್ಮಿದೆ; ಅಂಥ ಶ್ರೇಷ್ಠ ನಾಯಕತ್ವ ನರೇಂದ್ರ ಮೋದಿ ಅವರದು ಎಂದು ವಿವರಿಸಿದರು.
ಕಾಂಗ್ರೆಸ್ ಆಡಳಿತದಲ್ಲಿ ಜಮ್ಮು ಕಾಶ್ಮೀರ, ಹುಬ್ಬಳ್ಳಿಯಲ್ಲಿ ತ್ರಿವರ್ಣ ಧ್ವಜ ಹಾರಿಸಲಾಗದ ಪರಿಸ್ಥಿತಿ ಇತ್ತು. ಈಗ ಪರಿವರ್ತನೆ ಆಗಿದೆ. ತಿರಂಗ ಧ್ವಜಕ್ಕೆ ಜಗತ್ತಿನೆಲ್ಲೆಡೆ ಗೌರವ ಸಿಗುತ್ತಿದೆ ಎಂದು ತಿಳಿಸಿದರು. ವಿಶ್ವಗುರು ಭಾರತ ನಿರ್ಮಾಣವಾಗುತ್ತಿದೆ ಎಂದರು.
ಮುಂದಿನ ಚುನಾವಣೆ ಬಳಿಕ ಸಿದ್ರಾಮಣ್ಣ ಒಳಗಿರ್ತಾರೋ ಹೊರಗಿರ್ತಾರೋ ಗೊತ್ತಿಲ್ಲ. ಒಳಗಿದ್ದರೂ ಎಲ್ಲಿರ್ತಾರೋ ತಿಳಿದಿಲ್ಲ ಎಂದ ಅವರು, ವಿಭಜನಾವಾದ ಕಾಂಗ್ರೆಸ್ ಪಕ್ಷದ ಕೊಡುಗೆ ಎಂದು ಟೀಕಿಸಿದರು. ಬಿಜೆಪಿ, ಭಾರತ್ ಜೋಡೋ ಮಾಡಿದ ಪಕ್ಷ ಎಂದು ತಿಳಿಸಿದರು.
ಗರೀಬಿ ಹಠಾವೋ ಘೋಷಣೆಯಡಿ ಗಾಂಧಿ- ಖರ್ಗೆ- ಸಿದ್ರಾಮಣ್ಣ- ಡಿಕೆಶಿ ಕುಟುಂಬಗಳ ಗರೀಬಿ ದೂರವಾಯಿತು. ಜನ್ ಧನ್ ಸೇರಿದಂತೆ ಹಲವು ಜನಪರ ಯೋಜನೆಗಳ ಮೂಲಕ ನೈಜ ಗರೀಬಿ ಹಠಾವೋ ಮಾಡಿದವರಿದ್ದರೆ ಅದು ಮೋದಿಜಿ ಎಂದು ವಿವರ ನೀಡಿದರು.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಸಚಿವ ಕೆ.ಗೋಪಾಲಯ್ಯ, ಶಾಸಕ ಪ್ರೀತಮ್ ಗೌಡ, ಜಿಲ್ಲಾ ಅಧ್ಯಕ್ಷ ಹೆಚ್.ಕೆ. ಸುರೇಶ್, ನಗರಸಭಾ ಅಧ್ಯಕ್ಷ ಮೋಹನ್ ಕುಮಾರ್, ಜಿಲ್ಲಾ ಮತ್ತು ಮಂಡಲ ಮುಖಂಡರು ಉಪಸ್ಥಿತರಿದ್ದರು.