ಹರಪನಹಳ್ಳಿ : ವಿಜಯನಗರ ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಬಟ್ಟೆ ಒಗೆಯಲು ಹೋಗಿದ್ದ ನಾಲ್ವರು ಮಕ್ಕಳು ನೀರುಪಾಲಾಗಿರುವ ಘಟನೆ ಹರಪನಹಳ್ಳಿ ತಾಲುಕಿನ ಹಾರಕನಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿಬೇವೂರು ತಾಂಡದಲ್ಲಿ ನಡೆದಿದೆ.
ನಂದಿಬೇವೂರು ತಾಂಡದ ಅಭಿ (13), ಅಶ್ವನಿ (14), ಕಾವ್ಯ (18) ಹಾಗೂ ಹೂವಿನಹಡಗಲಿ ತಾಲೂಕಿನ ತುಂಬಿನಕೆರೆ ತಾಂಡದ ಅಪೂರ್ವ (18) ಮೃತ ದುರ್ದೈವಿಗಳು. ದೇವಿ ಹಬ್ಬಕ್ಕೆಂದು ನಂದಿಬೇವೂರಿಗೆ ಬಂದಿದ್ದರು. ಬುಧವಾರ ಬೆಳಗ್ಗೆ ಬಟ್ಟೆ ತೊಳೆಯಲು ಪಕ್ಕದ ಹೊಂಡಕ್ಕೆ ಹೋಗಿದ್ದರು. ಈ ವೇಳೆ ಅಭಿ ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದಾನೆ. ಅಭಿಯ ರಕ್ಷಣೆಗೆ ಬಂದ ಮೂವರು ಬಾಲಕಿಯ ನೀರು ಪಾಲಾಗಿದ್ದಾರೆ.
ನಾಲ್ವರ ಶವಗಳು ಪತ್ತೆಯಾಗಿದ್ದು, ವೈದ್ಯಕೀಯ ಪರೀಕ್ಷೆ ಬಳಿಕ ಶವಗಳನ್ನು ಕುಟುಂಬಗಳಿಗೆ ನೀಡಲಾಗಿದೆ. ಘಟನೆ ಸಂಬಂಧ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.