ಮೈಸೂರು: ಈ ಬಾರಿ ಅರಮನೆ ನಗರಿಯಲ್ಲಿ ಅದ್ಧೂರಿಯಾಗಿ ನಡೆದ ದಸರಾಗೆ ಬರೋಬ್ಬರಿ 28 ಕೋಟಿ ರೂಪಾಯಿ ಖರ್ಚಾಗಿದೆ.
ಕಳೆದ ಎರಡು ವರ್ಷ ಕೊರೊನಾದಿಂದಾಗಿ ಅರಮನೆ ಆವರಣಕ್ಕೆ ಮಾತ್ರ ಸೀಮಿತವಾಗಿದ್ದ ದಸರಾ ಈ ಬಾರಿ ಅದ್ಧೂರಿಯಾಗಿ ನಡೆದಿದೆ. ಅದ್ಧೂರಿ ಆಚರಣೆಗೆ ಮೈಸೂರು ಜಿಲ್ಲಾಡಳಿತಕ್ಕೆ ವಿವಿಧ ಮೂಲಗಳಿಂದ ಒಟ್ಟು 31 ಕೋಟಿ 8 ಲಕ್ಷ ರೂಪಾಯಿ ಹಣ ಸಂದಾಯವಾಗಿತ್ತು. ಇದರಲ್ಲಿ 76 ಲಕ್ಷ ರೂಪಾಯಿ ಗೋಲ್ಡ್ ಕಾರ್ಡ್ ಹಾಗೂ ದಸರಾ ಟಿಕೆಟ್ ಮಾರಾಟದಿಂದಲೇ ಬಂದಿದೆ.
ಬಂದ 31 ಕೋಟಿ 8 ಲಕ್ಷ ರೂಪಾಯಿಯಲ್ಲಿ 28 ಕೋಟಿ 74 ಲಕ್ಷ ರೂಪಾಯಿ ದಸರಾಗೆ ಖರ್ಚಾಗಿದೆ. ಇದರಲ್ಲೇ ಮಂಡ್ಯ , ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳಿಗೆ ಬಿಡುಗಡೆ ಮಾಡಿದ ದಸರಾ ಅನುದಾನ ಕೂಡ ಸೇರಿದೆ. ಮೈಸೂರಿನ ಯದುವಂಶದವರಿಗೆ ಗೌರವಧನವಾಗಿ 47 ಲಕ್ಷ ರೂಪಾಯಿ ನೀಡಲಾಗಿದೆ.
ಯುವ ದಸರಾ ಹಾಗೂ ಯುವ ಸಂಭ್ರಮಕ್ಕೆ 6 ಕೋಟಿ 36 ಲಕ್ಷ ರೂಪಾಯಿ ವೆಚ್ಚವಾಗಿದೆ. ದಸರಾ ಮೆರವಣಿಗೆಗೆ 2 ಕೋಟಿ 22 ಲಕ್ಷ, ಪಂಜಿನ ಕವಾಯತಿಗೆ 1 ಕೋಟಿ 17 ಲಕ್ಷ ರೂ.ಗಳಷ್ಟು ಹಣ ಖರ್ಚಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾಹಿತಿ ನೀಡಿದ್ದಾರೆ.