ಕಾರವಾರ: ಯಲ್ಲಾಪುರ ಹಾಗೂ ಜೋಯಿಡಾ ತಾಲೂಕಿನ ಗಡಿಯ ಶಿವಪುರ ಗ್ರಾಮದಲ್ಲಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ತೂಗು ಸೇತುವೆಯ ಮೇಲೆ ಅಪರಿಚಿತರು ಕಾರನ್ನು ಚಲಾಯಿಸಿಕೊಂಡು ಹೋಗಿ ಆತಂಕ ಸೃಷ್ಠಿಸಿದ ಘಟನೆ ನಡೆದಿದೆ.
ಜನರು ಓಡಾಡುವ ತೂಗು ಸೇತುವೆಯಲ್ಲಿ ಕಾರನ್ನು ಚಲಾಯಿಸಿಕೊಂಡು ಬಂದಿದ್ದಕ್ಕೆ ಸ್ಥಳೀಯರು ಆಕ್ಷೇಪಿಸಿದಾಗ ಕಾರಿನಲ್ಲಿದ್ದವರು ಅನುಚಿತವಾಗಿ ವರ್ತಿಸಿ, ದರ್ಪ ತೋರಿದ್ದಾರೆ. ಸೇತುವೆಯಲ್ಲಿ ಸಾಗಿ ಬಹುದೂರ ಬಂದಿದ್ದ ಕಾರನ್ನು ಸ್ಥಳೀಯರು ತಡೆದು, ಬಂದ ದಾರಿಗೆ ಹಿಂದಕ್ಕೆ ಕಳುಹಿಸಿದ್ದಾರೆ.
ಕಾರು ಚಲಾಯಿಸಿ ಸೇತುವೆಗೆ ಹಾನಿಯಾಗಿ ಅಪಾಯವಾದರೆ ಯಾರು ಹೊಣೆಯಾಗುತ್ತಾರೆ ಎಂದು ಪ್ರವಾಸಿಗರನ್ನು ಸ್ಥಳೀಯರು ಪ್ರಶ್ನಿಸಿದ್ದಾರೆ. ಗುಜರಾತ್ನ ಮೊರ್ಬಿ ಯಲ್ಲಿ ತೂಗುಸೇತುವೆ ಕುಸಿದು ನೂರಾರು ಜನ ಮೃತಪಟ್ಟ ಘಟನೆ ಮುಂದಿರುವಾಗಲೇ ಕೆಲವರು ಎಚ್ಚೆತ್ತುಕೊಳ್ಳದೇ ಇರುವುದು ದುರಂತವಾಗಿದೆ. ಪ್ರಸಿದ್ಧ ಯಾತ್ರಾಸ್ಥಳ ಜೊಯಿಡಾ ತಾಲೂಕಿನ ಉಳವಿಯಿಂದ ಬರುವ ಅನೇಕ ಮಂದಿ ಶಿವಪುರದ ತೂಗು ಸೇತುವೆಗೆ ಭೇಟಿ ನೀಡುತ್ತಾರೆ. ಅಲ್ಲಿನ ಪ್ರಾಕೃತಿಕ ಸೌಂದರ್ಯದ ಕಾರಣ ಪ್ರವಾಸಿ ತಾಣವಾಗಿಯೂ ಮಾರ್ಪಟ್ಟಿದೆ. ಹಲವು ಗ್ರಾಮಸ್ಥರಿಗೆ ಈ ತೂಗು ಸೇತುವೆ ದೈನಂದಿನ ಜೀವನದ ಅಗತ್ಯ ಸೌಕರ್ಯವಾಗಿದೆ.