ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅವರಿಗೆ ರಾಜ್ಯ ಸರ್ಕಾರದಿಂದ ನೀಡುತ್ತಿರುವ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಇನ್ನು ಸೂಪರ್ ಸ್ಟಾರ್ ತಮಿಳು ನಟ ರಜನಿಕಾಂತ್, ತೆಲಗು ನಟ ಜೂ.ಎನ್ ಟಿ ಆರ್ ವಿಶೇಷ ಅತಿಥಿಯಾಗಿ ಆಗಮಿಸಲಿದ್ದಾರೆ.
ನಗರದ ವಿಧಾನಸೌಧದಲ್ಲಿ ಎದುರಿಗೆ ಅದ್ಧೂರಿಯಾಗಿ ಸಮಾರಂಭ ನಡೆಯಲಿದೆ. ಹೀಗಾಗಿ ವಿಧಾನಸೌಧ ಸುತ್ತಮುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದ್ದು 7 ಜನ ಎಸಿಪಿ, 16 ಜನ ಇನ್ಸ್ಪೆಕ್ಟರ್, 25 ಪಿಎಸ್ಐ 300 ಕಾನ್ಸ್ಟೇಬಲ್ಗಳು ಹಾಗೂ 6 ಕೆಎಸ್ಆರ್ಪಿ ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ವಿವಿಐಪಿಗಳಿಗೆ ಪ್ರವೇಶಾವಕಾಶ ನೀಡಲಾಗಿದ್ದು, ಪೂರ್ವ ದ್ವಾರದಲ್ಲಿ ವಿಐಪಿಗಳಿಗೆ ಅವಕಾಶ ಮಾಡಲಾಗಿದೆ. ಉಳಿದಂತೆ, ಪಾಸ್ ಇಲ್ಲದಿದ್ದರೆ ಕಾರ್ಯಕ್ರಮಕ್ಕೆ ಪ್ರವೇಶವಿಲ್ಲ. ಸಾರ್ವಜನಿಕರು ವಿಧಾನಸೌಧದ ಮುಂಭಾಗದ ರಸ್ತೆಯಲ್ಲಿ ನಿಂತು ಕಾರ್ಯಕ್ರಮ ನೋಡಬಹುದು ಎಂದು ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದರು.