ಧಾರವಾಡ : ರಾಜ್ಯ ಸರಕಾರದಿಂದ ಪ್ರಸಕ್ತ ಸಾಲಿಗೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಕಲಘಟಗಿ ತಾಲೂಕಿನ ಬೆಲವಂತರ ಗ್ರಾಮದ ದೊಡ್ಡಾಟ ಕಲಾವಿದ ಅಡವಯ್ಯ ಹಿರೇಮಠ ಅವರಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರ ಪರವಾಗಿ ಜಿಲ್ಲಾಡಳಿತದಿಂದ ಕಲಘಟಗಿ ತಹಶೀಲ್ದಾರ ಯಲ್ಲಪ್ಪ ಗೊಣೆನ್ನವರ ಅವರು ಇಂದು ಬೆಳಿಗ್ಗೆ ಸನ್ಮಾನಿಸಿ, ಗೌರವಿಸಿದರು.
ಅವರು ಇಂದು ಬೆಳಿಗ್ಗೆ ಜಿಲ್ಲಾಡಳಿತ ಮತ್ತು ಕಲಘಟಗಿ ತಾಲೂಕು ಆಡಳಿತದವತಿಯಿಂದ, ಬೆಲವಂತರ ಗ್ರಾಮದ ಪ್ರಶಸ್ತಿ ಪುರಸ್ಕೃತ ಅಡವಯ್ಯ ಹಿರೇಮಠ ಅವರ ಮನೆಗೆ ಭೇಟಿ ನೀಡಿ, ಫಲಪುಷ್ಪ ನೀಡಿ, ಶಾಲು ಹೊದಿಸಿ, ಗೌರವಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಯಲ್ಲಪ್ಪ ಅವರು, ಜಿಲ್ಲಾಧಿಕಾರಿಗಳ ಸಂದೇಶ ವಾಚಿಸಿ ಮಾತನಾಡಿ, ಜಾನಪದ, ರಂಗಭೂಮಿ ಕಲೆಗಳ ಪರಂಪರೆಗೆ ಹೆಸರಾಗಿರುವ ಧಾರವಾಡ ಜಿಲ್ಲೆಯ ನಾಲ್ಕು ಜನ ಹಿರಿಯರಿಗೆ ಈ ಸಲದ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದೆ. ದೊಡ್ಡಾಟ ಕಲಾವಿದರಾದ ಅಡವಯ್ಯ ಹಿರೇಮಠ ಅವರು ಜಾನಪದ ಕ್ಷೇತ್ರದಲ್ಲಿ ನಿರಂತರ ಸೇವೆ ಸಲ್ಲಿಸುವ ಮೂಲಕ ರಂಗಭೂಮಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಸರ್ಕಾರ ಅವರ ಕಲಾ ಸೇವೆಯನ್ನು ಗುರುತಿಸಿ, ರಾಜ್ಯಮಟ್ಟದ ಪ್ರಶಸ್ತಿ ನೀಡಿ, ಅಭಿನಂದಿಸಿರುವುದು ಸಂತಸ ತಂದಿದೆ. ಅವರನ್ನು ಈ ಸಂದರ್ಭದಲ್ಲಿ ಜಿಲ್ಲೆಯ ಪರವಾಗಿ ಗೌರವಿಸುವುದು ನಮಗೆ ಹೆಮ್ಮೆ ಎನಿಸಿದೆ ಎಂದು ಶುಭ ಹಾರೈಸಿದರು.