ಮೊರ್ಬಿ : ಗುಜರಾತ್ನ ಮೊರ್ಬಿಯಲ್ಲಿ ಭಾನುವಾರ (ಅಕ್ಟೋಬರ್ 30) ಕೇಬಲ್ ಸೇತುವೆ ಕುಸಿದು ಸುಮಾರು 400 ಜನರು ನದಿಗೆ ಬಿದ್ದಿದ್ದಾರೆ. ಇನ್ನು ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 40ಕ್ಕೆ ಏರಿಕೆಯಾಗಿದ್ದು, ಸುಮಾರು100 ಮಂದಿಗೆ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಪಘಾತದ ಬಗ್ಗೆ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಅವರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ಪರಿಹಾರ ಮತ್ತು ರಕ್ಷಣಾ ಕಾರ್ಯಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮೊರ್ಬಿ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಯಿಂದ 2 ಲಕ್ಷ ರೂ.ಗಳನ್ನು ಮತ್ತು ಗಾಯಗೊಂಡವರಿಗೆ 50,000 ರೂ.ಗಳನ್ನ ನೀಡಲಾಗುವುದು ಎಂದು ಪ್ರಧಾನಿ ಹೇಳಿದರು.
ರಕ್ಷಣಾ ತಂಡವನ್ನು ತಕ್ಷಣವೇ ಸ್ಥಳಕ್ಕೆ ಕಳುಹಿಸುವಂತೆ ಪ್ರಧಾನಿ ಮೋದಿ ಸಿಎಂ ಭೂಪೇಂದ್ರ ಪಟೇಲ್ ಅವ್ರಿಗೆ ಸೂಚಿಸಿದರು. ಸ್ವತಃ ಪರಿಸ್ಥಿತಿಯನ್ನ ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡುವಂತೆ ಮತ್ತು ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿಯನ್ನು ವಹಿಸಿಕೊಳ್ಳುವಂತೆ ಅವರು ಸಿಎಂಗೆ ನಿರ್ದೇಶನ ನೀಡಿದರು. ಘಟನೆಯಿಂದ ಬಾಧಿತರಾದವರಿಗೆ ಸಾಧ್ಯವಿರುವ ಎಲ್ಲಾ ಸಹಾಯವನ್ನ ಒದಗಿಸುವಂತೆ ಸೂಚಿಸಿದ್ದಾರೆ. ಅಪಘಾತದ ಸಮಯದಲ್ಲಿ ಸುಮಾರು 500 ಜನರು ಸೇತುವೆಯ ಮೇಲೆ ಹಾಜರಿದ್ದರು ಎನ್ನಲಾಗ್ತಿದೆ.
ಮಚ್ಚು ನದಿಗೆ ನಿರ್ಮಿಸಿರುವ ಈ ಸೇತುವೆಯನ್ನು 3 ದಿನಗಳ ಹಿಂದೆಯಷ್ಟೇ ಜನಸಾಮಾನ್ಯರಿಗೆ ಮುಕ್ತಗೊಳಿಸಲಾಗಿತ್ತು. ಹೀಗಿರುವಾಗ ಹೊಸದಾಗಿ ನಿರ್ಮಿಸಿರುವ ಸೇತುವೆ ಒಡೆಯುವುದಾದರೂ ಹೇಗೆ ಎಂಬ ಪ್ರಶ್ನೆ ಎದ್ದಿದೆ.
ಮಾಧ್ಯಮ ವರದಿಗಳ ಪ್ರಕಾರ, ಈ ಸೇತುವೆಯನ್ನು ಕಳೆದ ಏಳು ತಿಂಗಳಿಂದ ಮುಚ್ಚಲಾಗಿದ್ದು, ಫಿಟ್ನೆಸ್ ಪ್ರಮಾಣಪತ್ರವನ್ನು ಪಡೆಯದೆ ಮೂರು ದಿನಗಳ ಹಿಂದೆ ಇದನ್ನ ಸಾರ್ವಜನಿಕರಿಗೆ ತೆರೆಯಲಾಗಿದೆ ಎಂದು ವರದಿಯಾಗಿದೆ.