ಬೆಂಗಳೂರು: ಇನ್ನೇನು ದೀಪಾವಳಿ ಹಬ್ಬದ ಸಂಭ್ರಮದ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ. ರಾಜ್ಯದೆಲ್ಲೆಡೆ ಹಬ್ಬದ ಆಚರಣೆಗೆ ಭಾರದ ಸಿದ್ಧತೆ ಸಾಗಿರುವ ಬೆನ್ನಲ್ಲೇ, ಹಬ್ಬದ ವೇಳೆ ಪಟಾಕಿ ಸಿಡಿಸುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾರ್ಗಸೂಚಿ ಪ್ರಕಟ ಮಾಡಿದೆ.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪಟಾಕಿ ಹಚ್ಚಲು ಸಮಯ ನಿಗದಿ ಮಾಡಿ ಆದೇಶ ಹೊರಡಿಸಿದ್ದು, ಅಕ್ಟೋಬರ್ 24 ಮತ್ತು 26 ರವರೆಗೆ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ರಾತ್ರಿ 8 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಬೇಕು ಎಂದು ಸುತ್ತೋಲೆ ಹೊರಡಿಸಿದೆ.
ಒಂದು ವೇಳೆ ಆದೇಶ ಪಾಲಿಸದಿದ್ದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಸರಕಾರ ಜನತೆಗೆ ಎಚ್ಚರಿಕೆ ನೀಡಿದೆ. ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಮತ್ತು ಪಟಾಕಿ ಸಿಡಿಸಿದ ನಂತರದ ಘನತ್ಯಾಜ್ಯ ವಸ್ತುಗಳಿಂದ ಮಾಲಿನ್ಯ ಉಂಟಾಗುವುದರಿಂದ ಸರಣಿ ಸ್ಫೋಟಕ ಪಟಾಕಿಗಳನ್ನು ತಯಾರಿಸುವುದು, ಮಾರಾಟ ಮಾಡುವುದು ಮತ್ತು ಬಳಸುವುದು ನಿಷೇಧ.
ಸಿಡಿಮದ್ದು ಪಟಾಕಿಗಳನ್ನು ಅಧಿಕೃತವಾಗಿ ಪರವಾನಗಿ ಪಡೆದ ಮಾರಾಟಗಾರರು ಮಾತ್ರ ಮಾರಾಟ ಮಾಡುವುದು ಮತ್ತು ಅಧಿಕೃತವಾಗಿ ಪರವಾನಗಿ ಪಡೆದವರು ಸಿಡಿಮದ್ದು ಪಟಾಕಿಗಳನ್ನು ಈ ಆದೇಶಾನುಸಾರ ಮಾತ್ರ ಮಾರಾಟ ಮಾಡುವುದು.