*ಅವಿನಾಶ್ ಆರ್ ಭೀಮಸಂದ್ರ ಜೊತೆಗೆ ವಸಂತ್ ಬಿ ಈಶ್ವರಗೆರೆ
ಬೆಂಗಳೂರು : ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳಿಗೆ ದೀಪಾವಳಿ ಹಬ್ಬದ ಕೊಡುಗೆ ನೀಡಿದ್ದು, ಎಸ್ ಸಿ, ಎಸ್ ಟಿ ಮೀಸಲಾತಿ ಹೆಚ್ಚಳ ಸಂಬಂಧ ನ್ಯಾ.ನಾಗಮೋಹನ್ ದಾಸ್ ಸಮಿತಿ ನೀಡಿದ್ದ ವರದಿಯ ಶಿಫಾರಸ್ಸನ್ನು ಯಥಾವತ್ತಾಗಿ ಒಪ್ಪಿಕೊಂಡು, ಪರಿಶಿಷ್ಟ ಸಮುದಾಯಗಳ ಮೀಸಲಾತಿ ಹೆಚ್ಚಳವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ.
ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ
ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಅಧ್ಯಾದೇಶ, 2022 ಇದಕ್ಕೆ 2022ರ ಅಕ್ಟೋಬರ್ ತಿಂಗಳ 23ನೇ ದಿನಾಂಕದಂದು ರಾಜ್ಯಪಾಲರ ಒಪ್ಪಿಗೆ ದೊರೆತಿದ್ದು, ಸಾಮಾನ್ಯ ತಿಳುವಳಿಕೆಗಾಗಿ ಇದನ್ನು 2022ರ ಕರ್ನಾಟಕ ಅಧ್ಯಾದೇಶ ಸಂಖ್ಯೆ: 07 ಎಂಬುದಾಗಿ ದಿನಾಂಕ 23ನೇ ಅಕ್ಟೋಬರ್ 2022ರಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಪತ್ರಿಕೆಯಲ್ಲಿ ಪ್ರಕಟಿಸಬೇಕೆಂದು ಆದೇಶಿಸಲಾಗಿದೆ, 2022 ರ ಕರ್ನಾಟಕ ಅಧ್ಯಾದೇಶ ಸಂಖ್ಯೆ: 07 ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಅಧ್ಯಾದೇಶ, 2022. (ಭಾರತ ಗಣರಾಜ್ಯದ ಎಪ್ಪತ್ತಮೂರನೇ ವರ್ಷದಲ್ಲಿ ಕರ್ನಾಟಕ ರಾಜ್ಯಪಾಲರಿಂದ ಪುಖ್ಯಾಪಿತವಾಗಿ 2022 ರ ಅಕ್ಟೋಬರ್ ತಿಂಗಳ 23ನೇ ದಿನಾಂಕದಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪುಕಟವಾಗಿದೆ).
ಕರ್ನಾಟಕ ರಾಜ್ಯದಲ್ಲಿರುವ ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ರಾಜ್ಯದಲ್ಲಿನ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳಿಗೆ ಸೇರಿದ ವ್ಯಕ್ತಿಗಳಿಗಾಗಿ ಮೀಸಲಾತಿಗೆ ಉಪಬಂಧ ಕಲ್ಪಿಸಲು ಒಂದು ಅಧ್ಯಾದೇಶ. ಕರ್ನಾಟಕ ರಾಜ್ಯವನ್ನು ಹಿಂದಿನ ಮೈಸೂರು ರಾಜ್ಯದಿಂದ ರೂಪಿಸಲಾಗಿದ್ದು ಮತ್ತು 1948ನೇ ಸಾಲಿನಲ್ಲಿ ಮೈಸೂರು ರಾಜ್ಯವು ಭಾರತದ ರಾಷ್ಟ್ರಾಧಿಪತ್ಯವನ್ನು ಸೇರಿರುವುದರಿಂದ ಮತ್ತು ಭಾರತ ಸಂವಿಧಾನದ 341ನೇ ಅನುಚ್ಛೇದದ ಮತ್ತು 342ನೇ ಅನುಚ್ಛೇದದ ಮೇರೆಗೆ ಭಾರತದ ರಾಷ್ಟ್ರಪತಿಯವರು ಕೆಲವು ಜಾತಿಗಳನ್ನು ಅನುಸೂಚಿತ ಜಾತಿಗಳು ಮತ್ತು ಅನುಸೂಚಿತಪಂಗಡಗಳೆಂದು ಘೋಷಿಸಿರುವುದರಿಂದ. ಇನ್ನೂ ಕೆಲವು ಸಮುದಾಯಗಳನ್ನು ಸೇರಿಸಿದ ನಂತರ ರಾಜ್ಯದಲ್ಲಿನ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಪಂಗಡಗಳ ಒಟ್ಟು ಜನಸಂಖ್ಯೆಯು ರಾಜ್ಯದಲ್ಲಿ ಅತಿ ತ್ವರಿತಗತಿಯಲ್ಲಿ ತೀವ್ರವಾಗಿ ಹೆಚ್ಚಿರುವುದರಿಂದ.
1976ನೇ ವರ್ಷದಲ್ಲಿ, ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಪಂಗಡಗಳ ಆದೇಶಗಳ (ತಿದ್ದುಪಡಿ) ಅಧಿನಿಯಮ, 1976ರ (1976ರ ಕೇಂದ್ರ ಅಧಿನಿಯಮ 108) ಅನುಸಾರ ಜಾತಿಗಳಿಗೆ ಹಾಕಲಾದ ಭೌಗೋಳಿಕ ಮಿತಿಗಳನ್ನು ತೆಗೆದುಹಾಕಿದ್ದು, ಇದೂ ಸಹ ಕರ್ನಾಟಕ ರಾಜ್ಯದಲ್ಲಿ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಪಂಗಡಗಳ ಜನಸಂಖ್ಯೆಯ ಅಸಾಧಾರಣ ಹೆಚ್ಚಳಕ್ಕೆ ಕಾರಣವಾಗಿರುವುದರಿಂದ, ಕರ್ನಾಟಕ ರಾಜ್ಯವು ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳಿಗಾಗಿ 18% ಸಂಯೋಜಿತ ಮೀಸಲಾತಿಯನ್ನು 1955ರ ಏಪ್ರಿಲ್ನಲ್ಲಿ ಸರ್ಕಾರದ ಆದೇಶ E-185-285 RBS-35-34- 2ರ ಮೂಲಕ ಕಲ್ಪಿಸಿರುತ್ತದೆ. ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಪಂಗಡಗಳ ಜನಸಂಖ್ಯೆಯು ಮತ್ತು ಅವು ಒಳಗೊಳ್ಳುವ ಜಾತಿಗಳ ಸಂಖ್ಯೆಯು ತರುವಾಯ ಹೆಚ್ಚಾಗಿದ್ದರೂ ಅವರಿಗೆ ಕಲ್ಪಿಸಲಾದ ಮೀಸಲಾತಿಯು 1958ನೇ ಸಾಲಿನಲ್ಲಿ ಇದ್ದಂತೆ ಅಂದರೆ ಅನುಸೂಚಿತ ಜಾತಿಗಳಿಗೆ 15% ಮತ್ತು ಅನುಸೂಚಿತ ಪಂಗಡಗಳಿಗೆ 3% ಉಳಿದುಕೊಂಡು ಬಂದಿರುವುದರಿಂದ, ಆನಂತರ, ದತ್ತಾಂಶ ಸಂಗ್ರಹವನ್ನು ಬಾಕಿಯಿರಿಸಿ ಸರ್ಕಾರವು ಸರ್ಕಾರಿ ಆದೇಶ ಸಂ.ಜಿಎಡಿ (ಒಎಂ) 46 ಜಿಆರ್ಆರ್ 57, ದಿನಾಂಕ: 04.02.1958ರ ಮೂಲಕ ಅನುಸೂಚಿತ ಜಾತಿಗಳಿಗೆ 15% ಮತ್ತು ಅನುಸೂಚಿತ ಪಂಗಡಗಳಿಗೆ 3% ಮೀಸಲಾತಿಯನ್ನು ಕಲ್ಪಿಸಿ ಆದೇಶಿಸಿತ್ತು. ಅದೇ ಶೇಕಡಾವಾರು ಮೀಸಲಾತಿಯನ್ನು ಇತ್ತೀಚಿನ ಸರ್ಕಾರದ ಆದೇಶ ಸಂ: ಎಸ್ಡಬ್ಲೂಡಿ 225 ಬಿಸಿಎ 2000, ದಿನಾಂಕ: 30ನೇ ಮಾರ್ಚ್ 2002ರಲ್ಲಿ ಮುಂದುವರೆಸಲಾಗಿದ್ದು, ಅದು ಈ ಕೆಳಕಂಡಂತಿದೆ:
(ಎ) ಅನುಸೂಚಿತ ಜಾತಿಗಳು: 15%
(ಬಿ) ಅನುಸೂಚಿತ ಪಂಗಡಗಳು: 3%
(ಸಿ) ಹಿಂದುಳಿದ ವರ್ಗ: 32%
ಸಾಂವಿಧಾನಿಕ ಆದೇಶದ ಅನುಸಾರ ಸಾರ್ವಜನಿಕ ಉದ್ಯೋಗ ಮತ್ತು ಶೈಕ್ಷಣಿಕ ಸಂಸ್ಥೆಗಳೆರಡರಲ್ಲಿಯೂ ಸಾಕಷ್ಟು ಪ್ರಾತಿನಿಧ್ಯವಿಲ್ಲವೆಂದು ಅನುಸೂಚಿತ ಜಾತಿಗಳು ಮತ್ತು ಪಂಗಡಗಳಿಗೆ ಸೇರಿದ ಸದಸ್ಯರು ನಿರಂತರವಾಗಿ ಬೇಡಿಕೆ ಮತ್ತು ಮನವಿಯನ್ನು ಮಾಡುತ್ತಿರುವುದರಿಂದ, ಹಾಗೂ ನಾಯಕ ವಿದ್ಯಾರ್ಥಿ ಸಂಘವು ಕರ್ನಾಟಕ ಉಚ್ಚನ್ಯಾಯಾಲಯದ ಮೊರೆ ಹೋಗಿರುವುದರಿಂದ, ಕರ್ನಾಟಕ ಉಚ್ಛ ನ್ಯಾಯಾಲಯವು ರಿಟ್ ಅರ್ಜಿ ಸಂ: 16852/2015ರಲ್ಲಿ ನಾಯಕ ವಿದ್ಯಾರ್ಥಿ ಸಂಘವು ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳಿಗೆ ಮೀಸಲಾತಿಯನ್ನು ಹೆಚ್ಚಿಸಲು ದಾಖಲಿಸಿದ ಮನವಿಯನ್ನು ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿರುವುದರಿಂದ, ಮಾನ್ಯ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಈ ಕುರಿತು ತೀರ್ಮಾನ ಕೈಗೊಳ್ಳಲು ಮತ್ತು ಪ್ರಾಯೋಗಿಕ ಜನ್ಯ (empirical) ದತ್ತಾಂಶವನ್ನು ಸಂಗ್ರಹಿಸಲು ರಾಜ್ಯ ಸರ್ಕಾರವು ಉಲ್ಲೇಖಾದೇಶ ಸಂ. ಎಸ್ಡಬ್ಲೂಡಿ 303 ಪಿವಿವೈ 2015 ದಿನಾಂಕ: 22.07.2019ರ ಮೂಲಕ ನ್ಯಾಯಮೂರ್ತಿಗಳು, ಕರ್ನಾಟಕ ಉಚ್ಚ ನ್ಯಾಯಾಲಯ ಇವರ ನೇತೃತ್ವದಲ್ಲಿ ಆಯೋಗವೊಂದನ್ನು ನೇಮಿಸಿತು. ಆಯೋಗವು ಈ ಸಂಬಂಧ ವ್ಯಾಪಕ ಅಧ್ಯಯನವನ್ನು ಕೈಗೊಂಡು, ವರದಿಯನ್ನು ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ 02.07.2020ರಂದು ಸಲ್ಲಿಸಿತು. ಸದರಿ ವರದಿಯ ಪ್ರಮುಖ ಅಂಶಗಳು
ಇಂತಿವೆ,-
(ಎ)
ಕನಿಷ್ಟಮಿತಿಯಲ್ಲಿರುವ ಮತ್ತು ಈಗಲೂ ಮುಖ್ಯವಾಹಿನಿಯಿಂದ ಹೊರಗಿರುವ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳಲ್ಲಿನ ಅನೇಕ ಜಾತಿಗಳು ಮತ್ತು ಸಮುದಾಯಗಳು ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯ ಸಾಕ್ಷ್ಯವು ಕಂಡುಬಂದಿರುವುದರಿಂದ (ವಿಶೇಷವಾಗಿ ದುರ್ಬಲ ಬುಡಕಟ್ಟು ಸಮೂಹಗಳು (PVTGS), ಮಲಹೋರುವ ಜಾಡಮಾಲಿಗಳು, ಸಫಾಯಿ ಕರ್ಮಚಾರಿಗಳು, ದೇವದಾಸಿಯರು, ಅಲೆಮಾರಿಗಳು, ಅರೆ ಅಲೆಮಾರಿಗಳು ಇತ್ಯಾದಿ) (ಬಿ) ಪಶ್ಚಿಮ ಘಟ್ಟಗಳ ಜೊತೆಜೊತೆಗೆ ಒಣಭೂಮಿ ಭಾಗಗಳಲ್ಲಿ ರಾಜ್ಯದ ಉದ್ದಗಲಕ್ಕೂ ಹರಡಿರುವ ಪ್ರದೇಶಗಳಲ್ಲಿ ವಾಸಿಸುವ ದಕ್ಕಲಿಗರು, ಧೋಲಿಬಿಲ್, ಮಲೇರು, ಸೋಲಿಗರು ಮುಂತಾದ ಕೆಲವು ಸಮೂದಾಯಗಳಲ್ಲಿ ಅಂಥ ಹಿಂದುಳಿದಿರುವಿಕೆಯು ನಿಜವಾಗಿಯೂ ಹೆಚ್ಚಾಗಿದೆ. ಈ ಸಮುದಾಯಗಳು ಮೀಸಲಾತಿಯ ಪ್ರಯೋಜನಗಳನ್ನು ಸಾಕಷ್ಟು ಪಡೆಯಲು ಸಾಧ್ಯವಾರಿರುವುದಿಲ್ಲ.
(ಸಿ) ಅವರ ಜನಸಂಖ್ಯೆಗೆ ಹೋಲಿಸಿದಲ್ಲಿ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳಿಗಾಗಿ ಇರುವ ಶೈಕ್ಷಣಿಕ ಸಂಸ್ಥೆಗಳು, ಸರ್ಕಾರಿ ಉದ್ಯೋಗದಲ್ಲಿ ಅವರ ಪ್ರಾತಿನಿಧ್ಯವು ಸಾಕಷ್ಟಿಲ್ಲದಿರುವುದಕ್ಕೆ ಸಾಕ್ಷ್ಯವಿದ್ದು, ಇದು ಹಿಂದುಳಿದಿರುವಿಕೆಯಿಂದ ಹೊರಬರಲು ಅವರ ತೀವ್ರು ಸಂಕಷ್ಟಕರ ಪ್ರಯತ್ನಗಳನ್ನು ತೋರಿರುವುದು.
(ಡಿ) ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ಜನಸಂಖ್ಯೆಗೆ ಹೋಲಿಸಿದಲ್ಲಿ ಅವರ ಭೂ ಹಿಡುವಳಿಗಳು ಅಸಮಪ್ರಮಾಣದಲ್ಲಿವೆ ಮತ್ತು ತೀವ್ರವಾಗಿ ಕಡಿಮೆ ಇವೆ ಹಾಗೂ ಇದು ಅವರ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಒತ್ತಿಹೇಳುತ್ತದೆ.
(ಇ) ಮೇಲಿನ ಅಧ್ಯಯನದ ಆಧಾರದ ಮೇಲೆ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ಮೀಸಲಾತಿಗಳನ್ನು ಹೆಚ್ಚಿಸಲು ವಿಶೇಷ ಪುಕರಣವೊಂದನ್ನು ಮಾಡಬೇಕಿದ್ದು, ವಿಸ್ತ್ರತ ಅಧ್ಯಯನ ಮತ್ತು ವಿಶ್ಲೇಷಣೆಯ ಆಧಾರದಲ್ಲಿ ಅಂಥ ಹೆಚ್ಚಳಕ್ಕಾಗಿ ವಿಶೇಷ ಪಕರಣವನ್ನು ಮಾಡಿದ ತರುವಾಯ ಅನುಸೂಚಿತ ಜಾತಿಗಳಿಗೆ 17% ಮತ್ತು ಅನುಸೂಚಿತ ಪಂಗಡಳಿಗೆ 7% ಮೀಸಲಾತಿಯು ಅನುಕ್ರಮವಾಗಿ ಹೆಚ್ಚಾಗಲಿದೆ. ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗದ ವರದಿಯ ಅನುಷ್ಠಾನವನ್ನು ಅವಲೋಕಿಸಲು ಸರ್ಕಾರವು ನ್ಯಾಯಮೂರ್ತಿ ಸುಭಾಷ್ ಅಡಿ ಮತ್ತು ಇತರರ ಅಧ್ಯಕ್ಷತೆಯಲ್ಲಿ ಮತ್ತೊಂದು ಸಮಿತಿಯನ್ನು ನೇಮಿಸಿತು ಹಾಗೂ ಈ ಸಮಿತಿಯು ನ್ಯಾಯಮೂರ್ತಿ ಸುಭಾಷ್ ಅಡಿ ಮತ್ತು ಇತರರ ಅಧ್ಯಕ್ಷತೆಯಲ್ಲಿದ್ದು, ಅದರ ವರದಿಯನ್ನು 07.10.2022ರಂದು ಸಲ್ಲಿಸಿರುವುದರಿಂದ.
ನ್ಯಾಯಮೂರ್ತಿ ಸುಭಾಷ್ ಅಡಿಯವರ ಸಮಿತಿಯೂ ಸಹ ಆಯೋಗದ ವರದಿಯಲ್ಲಿ ಹೇಳಿರುವಂತೆ ವಿಶೇಷ ಸನ್ನಿವೇಶವನ್ನು ತೆರೆದಿಟ್ಟಿತು ಹಾಗೂ ಕೇಂದ್ರ ಸರ್ಕಾರಿ ಉದ್ಯೋಗ ಮತ್ತು ರಾಜ್ಯ ಸರ್ಕಾರಿ ಉದ್ಯೋಗ ದಲ್ಲಿ ಬುಡಕಟ್ಟು, ಪಂಗಡಗಳ ಮೀಸಲಾತಿಯನ್ನು ಹೋಲಿಸಿದಲ್ಲಿ, ಬುಡಕಟ್ಟು ಗಳಿಗೆ ಮೀಸಲಾತಿಯಲ್ಲಿ ಸಮಾನತೆಯ ಕೊರತೆಯನ್ನು ಗುರುತಿಸಿರುವುದರಿಂದ, ವರದಿಯು ಭಾರತ ರಾಷ್ಟ್ರೀಯ ಕಾನೂನು ಶಾಲೆ ವಿಶ್ವವಿದ್ಯಾಲಯ, ಬೆಂಗಳೂರು (ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ) ಅದರ ಅಧ್ಯಯನದಲ್ಲಿ ಹೇಳೀರುವ 74% ಬುಡಕಟ್ಟು ಸಮೂದಾಯಗಳು ಅಗೋಚರವಾಗಿರುವ ಮತ್ತು ಅವರ ಸಾಕ್ಷರತಾ ಪ್ರಮಾಣವು 3% ಗಿಂತ ಕಡಿಮೆ ಇರುವುದನ್ನೂ ಸಹ ಉಲ್ಲೇಖಿಸಿರುವುದರಿಂದ. ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ಅಡಿಯಲ್ಲಿ ಸೇರಿರುವ ಜಾತಿಗಳ ಸಂಖ್ಯೆಯನ್ನು ಇತರ ರಾಜ್ಯಗಳೊಂದಿಗೆ ಹೋಲಿಸಿದಲ್ಲಿ, ಆಗ ಇತರ ರಾಜ್ಯಗಳು ಕಡಿಮೆ ಸಂಖ್ಯೆಯ ಜಾತಿಗಳನ್ನು ಅಧಿಸೂಚಿಸಿದ್ದರೂ, ಅವರ ಶೇಕಡಾವಾರು ಮೀಸಲಾತಿಯು ಕರ್ನಾಟಕ ರಾಜ್ಯಕ್ಕಿಂತ ಹೆಚ್ಚಾಗಿ ಕಂಡುಬರುವುದನ್ನೂ ಸಹ ವರದಿಯು ಹೇಳಿರುವುದರಿಂದ ವರದಿಯು ಮಧ್ಯಪ್ರದೇಶ,
ರಾಜಸ್ತಾನ ಮತ್ತು ಉತ್ತರ ಪ್ರದೇಶದ ಉದಾಹರಣೆಯನ್ನು ಸೇರಿಸಿದೆ. ವರದಿಯು ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಪೈಕಿ ಅತ್ಯಂತ ವಂಚಿತ
ವರ್ಗಗಳಿಗೆ ಮೀಸಲಾತಿಯ ಅಗತ್ಯವನ್ನು ದಾಖಲಿಸಿದೆ. ಕರ್ನಾಟಕದಲ್ಲಿ ತಮ್ಮನ್ನು ಗುರುತಿಸಿಕೊಳ್ಳಲು ಮತ್ತು ಸಂಘಟಿತರಾಗಲು ಕಷ್ಟಕರವಾಗಿರುವ ಅಂಥ ಜನಸಂಖ್ಯೆಯ ಭಾಗವು 74% ರಷ್ಟಿದೆ. ಯಾವುದೇ ಅಸಮಾನತೆಯನ್ನು ಕಡಿಮೆಗೊಳಿಸಲು ರಾಜ್ಯದ ಅಧಿಕಾರವ್ಯಾಪ್ತಿ ಒಳಗಿರುವ ಧನಾತ್ಮಕ ಕ್ರಮಗಳ ಅಗತ್ಯವನ್ನೂ ಸಹ ವರದಿಯು ದಾಖಲಿಸಿದೆ. ಮುಂದುವರೆದು, ಸಾಮಾಜಿಕ ನ್ಯಾಯ ಮತ್ತು ಸಕಾರಾತ್ಮಕ ಕ್ರಮವು ಆಡಳಿತದ ಮೈಲಿಗಲ್ಲನ್ನು ರೂಪಿಸುವುದೆಂದು ಹಾಗೂ ರಾಜ್ಯವು ಸಮಸಮಾಜವನ್ನು ತರುವ ಕಾರ್ಯದಲ್ಲಿ ಬದ್ಧವಾಗಿರಬೇಕೆಂದು ಮತ್ತು ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ಹಿಂದುಳಿದಿರುವ ಪವರ್ಗಗಳ ಸದಸ್ಯರನ್ನು ಸಮಾಜದ ಮುಖ್ಯವಾಹಿನಿಯ ಭಾಗವಾಗಿಸಲು ಸತತ ಪ್ರಯತ್ನಗಳನ್ನು ಮಾಡಬೇಕೆಂದು ವರದಿಯು ಹೇಳಿದೆ.
ಇಂದಿನ ಸಮಾಜವು ಒಪ್ಪಿಕೊಂಡಂತೆ ಸಾರ್ವಜನಿಕ ಸೇವೆಯ ಭಾಗವಾಗಿರುವುದು, ಸಾಮಾಜಿಕ ಸ್ಥಾನಮಾನವನ್ನು ತಲುಪಲು ಹಾಗೂ ಆಡಳಿತ ನಿರ್ವಹಣೆಯಲ್ಲಿ ಪಾತ್ರವನ್ನು ವಹಿಸಲು ಸಕಾರಾತ್ಮಕ ಕ್ರಮದ ಮೂಲಕ ರಾಜ್ಯದ ಅಧಿಕಾರ ಹಂಚಿಕೆಯನ್ನು ಸಾಧ್ಯವಾಗಿಸಲು ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಹಿಂದುಳಿದಿರುವ ಪ್ರವರ್ಗಗಳನ್ನೂ ಸಹ ಮುಖ್ಯವಾಹಿನಿಗೆ ತರುವುದು ಸಂವಿಧಾನದ ಅನುಚ್ಛೇದ 16 (4)ರ ಉದ್ದೇಶವಾಗಿರುವುದರಿಂದ. ಮೇಲಿನದನ್ನು ಪರಿಗಣಿಸಿದ ನಂತರ ಸರ್ಕಾರವು ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳಿಗೆ ಸೇರಿದ ಸದಸ್ಯರಿಗಾಗಿ ಮೀಸಲಾತಿಗಳನ್ನು ಹೆಚ್ಚಿಸಲು ಅಸಾಧಾರಣ
ಸನ್ನಿವೇಶಗಳು ಮತ್ತು ವಿಶೇಷ ಪ್ರಕರಣವು ಈಡೇರಬೇಕಾಗಿರುವುದರಿಂದ. ಸಂವಿಧಾನದ 15ನೇ ಅನುಚ್ಛೇದದ (4)ನೇ ಖಂಡವು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಯಾವುದೇ ನಾಗರೀಕರ ವರ್ಗಗಳ ಏಳಿಗೆಗಾಗಿ ಯಾವುದೇ ವಿಶೇಷ ಉಪಬಂಧಗಳನ್ನು ಕಲ್ಪಿಸಲು ರಾಜ್ಯವನ್ನು ಸಮರ್ಥಗೊಳಿಸಿರುವುದರಿಂದ; ಅನುಸೂಚಿತ ಜಾತಿಗಳಿಗೆ ಮತ್ತು ಅನುಸೂಚಿತ ಪಂಗಡಗಳಿಗೆ ಸೇರಿದ ವ್ಯಕ್ತಿಗಳಿಗಾಗಿ ರಾಜ್ಯಾಧೀನ
ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಿಗೆ ಸಂಬಂಧಿಸಿದಂತೆ ಮೀಸಲಾತಿಯನ್ನು ಶೇಕಡಾ ಹದಿನೈದರಿಂದ ಶೇಕಡ ಹದಿನೇಳರಷ್ಟಕ್ಕೆ ಹಾಗೂ ಶೇಕಡಾ ಮೂರರಿಂದ ಶೇಕಡ ಏಳರಷ್ಟಕ್ಕೆ ಅನುಕ್ರಮವಾಗಿ ಹೆಚ್ಚಿಸತಕ್ಕದ್ದು.
ವಿವರಣೆ:- ಈ ಅಧ್ಯಾದೇಶದ ಉದ್ದೇಶಗಳಿಗಾಗಿ ರಾಜ್ಯಾಧೀನ ಸೇವೆಗಳು” ಎಂಬುದು ಈ
ಮುಂದಿನ ಸೇವೆಗಳನ್ನು ಒಳಗೊಳ್ಳುತ್ತದೆ:
(1) ಸರ್ಕಾರ;
(ii)ರಾಜ್ಯ ವಿಧಾನಮಂಡಲ;
(iii) ಯಾವುದೇ ಸ್ಥಳೀಯ ಪ್ರಾಧಿಕಾರ; ಅಥವಾ
(iv) ಸರ್ಕಾರದ ಒಡೆತನದಲ್ಲಿರುವ ಅಥವಾ ನಿಯಂತ್ರಣದಲ್ಲಿರುವ ಯಾವುದೇ ನಿಗಮ ಅಥವಾ ಕಂಪನಿ;
5. ಮೀಸಲಾತಿಗೆ ಬಾಧಕ ಉಂಟಾಗತಕ್ಕದ್ದಲ್ಲ. 3 ಮತ್ತು 4 ನೇ ಪ್ರಕರಣಗಳಲ್ಲಿ ಏನೇ ಒಳಗೊಂಡಿದ್ದರೂ, ಅನುಸೂಚಿತ ಜಾತಿಗಳು ಅಥವಾ ಅನುಸೂಚಿತ ಪಂಗಡಗಳಿಗೆ ಸೇರಿದ ವ್ಯಕ್ತಿಗಳ ಕ್ಷೇಮುಗಳನ್ನು ಅರ್ಹತೆಯ ಆಧಾರದ ಮೇಲೆ ಭರ್ತಿ ಮಾಡತಕ್ಕಂಥ ಮೀಸಲಿರಿಸದಿರುವ ಸ್ಥಾನಗಳು, ನೇಮಕಾತಿಗಳು ಅಥವಾ ಹುದ್ದೆಗಳಿಗೆ ಪರಿಗಣಿಸತಕ್ಕದ್ದು ಮತ್ತು ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳಿಗೆ ಸೇರಿದ ವ್ಯಕ್ತಿಯು ಅರ್ಹತೆಯ ಆಧಾರದ ಮೇಲೆ ಆಯ್ಕೆಯಾದಲ್ಲಿ ಸಂದರ್ಭಾನುಸಾರವಾಗಿ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳಿಗೆ ಅಥವಾ ಸ್ಥಾನಗಳಲ್ಲಿನ ನೇಮಕಾತಿಯಲ್ಲಿ ಅಥವಾ ಆ ಹುದ್ದೆಗಳಿಗೆ ಮೀಸಲಿರಿಸಿದ ಸಂಖ್ಯೆಗೆ ಯಾವುದೇ ರೀತಿಯಲ್ಲಿ ಬಾಧಕವನ್ನುಂಟು ಮಾಡತಕ್ಕದ್ದಲ್ಲ.
6. ನಿಯಮಗಳನ್ನು ರಚಿಸಲು ಅಧಿಕಾರ.- (1) ಸರ್ಕಾರವು ಈ ಅಧ್ಯಾದೇಶದ ಉಪಬಂಧಗಳನ್ನು ಕಾರ್ಯಗತಗೊಳಿಸುವ ಉದ್ದೇಶಗಳಿಗಾಗಿ ಸರ್ಕಾರಿ ರಾಜ್ಯ ಪತ್ರದಲ್ಲಿ ಅಧಿಸೂಚನೆಯ ಮೂಲಕ ನಿಯಮಗಳನ್ನು ರಚಿಸಬಹುದು.
(2) ಈ ಅಧ್ಯಾದೇಶದ ಅಡಿಯಲ್ಲಿ ಮಾಡಲಾದ ಪ್ರತಿಯೊಂದು ನಿಯಮವನ್ನು ಅದನ್ನು ರಚಿಸಿದ ತರುವಾಯ ಆದಷ್ಟು ಬೇಗನೆ ರಾಜ್ಯ ವಿಧಾನಮಂಡಲದ ಪ್ರತಿಯೊಂದು ಸದನದ ಮುಂದೆ ಒಂದು ಅಧಿವೇಶನ ಅಥವಾ ಎರಡು ಅನುಕ್ರಮ ಅಧಿವೇಶನಗಳಲ್ಲಿ ಅಡಕವಾಗಬಹುದಾದ ಒಟ್ಟು ಮೂವತ್ತು ದಿನಗಳ ಅವಧಿಯವರೆಗೆ ಅಧಿವೇಶನದಲ್ಲಿರುವಾಗ ಮಂಡಿಸತಕ್ಕದ್ದು ಮತ್ತು ಹೀಗೆ ಮಂಡಿಸಲಾದ ಅಧಿವೇಶನ ಅಥವಾ ನಿಕಟೋತ್ತರ ಅಧಿವೇಶನಗಳು ಮುಕ್ತಾಯವಾಗುವ ಮೊದಲು ಉಭಯ ಸದನಗಳು ನಿಯಮದಲ್ಲಿ ಯಾವುದೇ ಮಾರ್ಪಾಡು ಮಾಡಬೇಕೆಂದು ಒಪ್ಪಿದರೆ ಅಥವಾ ನಿಯಮವನ್ನು ಮಾಡಬಾರದೆಂದು ತೀರ್ಮಾನಿಸಿದರೆ ತದನಂತರ ಆ ನಿಯಮವು, ಆ ನಿಯಮದ ಅಡಿಯಲ್ಲಿ ಹಿಂದೆ ಮಾಡಲಾದ ಯಾವುದರ ಮಾನ್ಯತೆಗೂ ಪ್ರತಿಕೂಲವಾಗದಂತೆ ಅಂಥ ಮಾರ್ಪಾಟಾದ ರೀತಿಯಲ್ಲಿ ಮಾತ್ರ ಪರಿಣಾಮಕಾರಿಯಾಗತಕ್ಕದ್ದು ಅಥವಾ ಸಂದರ್ಭನುಸಾರ ಪರಿಣಾಮಕಾರಿಯಾಗತಕ್ಕದ್ದಲ್ಲ.
7. ತೊಂದರೆಗಳನ್ನು ನಿವಾರಿಸಲು ಅಧಿಕಾರ.- (1) ಈ ಅಧ್ಯಾದೇಶದ ಉಪಬಂಧಗಳನ್ನು ಜಾರಿಗೊಳಿಸುವಲ್ಲಿ ಯಾವುದೇ ತೊಂದರೆಯು ಉದ್ಭವಿಸಿದರೆ, ಸರ್ಕಾರವು, ಆದೇಶದ ಮೂಲಕ ಈ ಅಧ್ಯಾದೇಶದ ಉಪಬಂಧಗಳಿಗೆ ಅಸಂಗತವಾಗದಂತೆ, ಅಗತ್ಯವೆಂದು ಅಥವಾ ಯುಕ್ತವೆಂದು ತನಗೆ
ಕಂಡುಬರುವ ಉಪಬಂಧಗಳನ್ನು ಮಾಡಬಹುದು: ಪರಂತು, ಅಂಥ ಯಾವುದೇ ಆದೇಶವನ್ನು ಈ ಅಧ್ಯಾದೇಶವು ಪ್ರಾರಂಭವಾದ ದಿನಾಂಕದಿಂದ ಎರಡು ವರ್ಷಗಳ ಅವಧಿ ಮುಕ್ತಾಯವಾದ ತರುವಾಯ ಮಾಡತಕ್ಕದ್ದಲ್ಲ.
(2) ಈ ಪ್ರಕರಣದ ಅಡಿಯಲ್ಲಿ ಹೊರಡಿಸಲಾದ ಪ್ರತಿಯೊಂದು ಆದೇಶವನ್ನು ಅದನ್ನು ಹೊರಡಿಸಿದ ತರುವಾಯ ಆದಷ್ಟು ಬೇಗನೆ ವಿಧಾನಮಂಡಲದ ಪ್ರತಿಯೊಂದು ಸದನದ ಮುಂದೆ ಮಂಡಿಸತಕ್ಕದ್ದು.
ಥಾವರ್ಚಂದ್ ಗೆಹೊಟ್
ಕರ್ನಾಟಕ ರಾಜ್ಯಪಾಲರು
ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ