ವಿಜಯನಗರ: ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ತಿರುಗುತ್ತಿದ್ದ ಫ್ಯಾನ್ ನಲ್ಲಿ ಆಕಸ್ಮಿಕವಾಗಿ ಕೈಯಿಟ್ಟು ತೋರುಬೆರಳು ತುಂಡರಿಸಿಕೊಂಡಿದ್ದ ಬಾಲಕನ ತುಂಡಾದ ಬೆರಳನ್ನು ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಮರುಜೋಡಿಸಿ ಅದಕ್ಕೆ ಮರು ಜೀವ ನೀಡಿದ ಅಪರೂಪದ ಘಟನೆ ಬೆಳಕಿಗೆ ಬಂದಿದೆ
ಕೊಟ್ಟೂರು ತಾಲೂಕಿನ ಮಲ್ಲನಾಯಕನಹಳ್ಳಿಯ ಗ್ರಾಮದ ಪಾಂಡುರಂಗಪ್ಪ (13) ಎಂಬ ಯುವಕನ ಬೆರಳಿಗೆ ಶಸ್ತ್ರಚಿಕಿತ್ಸೆ ಮೂಲಕ ಕೂಡ್ಲಿಗಿ ಆಸ್ಪತ್ರೆಯ ಮೂಳೆತಜ್ಞ ಡಾ ಅಚ್ಯುತ್ ಅವರು ಮರು ಜೀವ ನೀಡಿದ್ದಾರೆ.
ಪಾಂಡುರಂಗ ಎನ್ನುವ ಬಾಲಕ ಗುರುವಾರ ರಾತ್ರಿ ಮನೆಯಲ್ಲಿದ್ದ ಫ್ಯಾನ್ ನಲ್ಲಿ ಆಕಸ್ಮಿಕ ಕೈ ಇಟ್ಟಿದ್ದರಿಂದ ತೋರುಬೆರಳಿನ ಉಗುರು ಇರುವ ಭಾಗ ತುಂಡಾಗಿ ಕೆಳಗೆ ಬಿದ್ದಿದ್ದು ಅದನ್ನು ಕವರ್ ನಲ್ಲಿಟ್ಟುಕೊಂಡು ಕೊಟ್ಟೂರು ಸಾರ್ವಜನಿಕ ಆಸ್ಪತ್ರೆಗೆ ಹೋಗಿದ್ದು ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಿದ್ದಾರೆ. ಬಾಲಕನ ಅದೃಷ್ಟವೆಂಬಂತೆ ಕೂಡ್ಲಿಗಿ ಆಸ್ಪತ್ರೆಯಲ್ಲಿ ರಾತ್ರಿ ಕರ್ತವ್ಯ ನಿರತರಾಗಿದ್ದ ಮೂಳೆ ತಜ್ಞ ವೈದ್ಯರಾದ ಡಾ. ಅಚ್ಯುತ್ ನಾಯಕ ಎಂಬುವರು ಬಾಲಕನ ತುಂಡಾದ ಬೆರಳನ್ನು ತೆಗೆದುಕೊಂಡು ಆ ಬೆರಳನ್ನು ಫ್ರಿಡ್ಜಲ್ಲಿಟ್ಟು, ಸಹಾಯಕರಾಗಿ ರಾತ್ರಿ ಕರ್ತವ್ಯದಲ್ಲಿದ್ದ ಸ್ಟಾಫ್ ನರ್ಸ್ ಮೈಲಾರಪ್ಪರನ್ನು ಕರೆದುಕೊಂಡು ಬೆರಳನ್ನು ಜೋಡಿಸುವ ಶಸ್ತ್ರಕ್ರಿಯೆಯಲ್ಲಿ ತೊಡಗಿ ಬೆರಳನ್ನು ಜೋಡಿಸಿ ಹೊಲಿಗೆ ಹಾಕುವ ಮೂಲಕ ಮರುಜೀವ ನೀಡಿದ್ದಾರೆ.