ಬೆಂಗಳೂರು : ತಾಲೂಕು ಹಂತದಲ್ಲಿ ಕ್ರೀಡಾ ಇಲಾಖೆಯ 176 ಕೋಚ್ ಕಂ ಸಂಯೋಜಕರ ಹುದ್ದೆಗಳನ್ನು ಮಂಜೂರು ಮಾಡಿ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.
ಇದೇ ಮೊದಲ ಬಾರಿಗೆ ತಾಲೂಕು ಮಟ್ಟದ ಹುದ್ದೆಗಳ ಮಂಜೂರು ಮಾಡಲಾಗಿದ್ದು, 176 ಕೋಚ್ ಕಂ ಸಂಯೋಜಕರ ಹುದ್ದೆಗಳ ಸೃಜನೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. 235 ಕೋಚ್ ಹುದ್ದೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು, ಆದರೆ ಸರ್ಕಾರ 176 ಹುದ್ದೆಗಳನ್ನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ಹಾಗೂ ತರಬೇತಿ ಒದಗಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗಿರುವ ಮಹತ್ವದ ಪ್ರಸ್ತಾವನೆಯೊಂದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಕ್ರೀಡಾ ಇಲಾಖೆ ಸಚಿವ ಡಾ ನಾರಾಯಣಗೌಡ ತಿಳಿಸಿದ್ದಾರೆ.
ಪ್ರತಿ ತಾಲೂಕಿಗೆ ಒಬ್ಬರಂತೆ 235 ಕೋಚ್ ಹುದ್ದೆಗಳ ಸೃಜನೆಗೆ ನಮ್ಮ ನಿರ್ದೇಶನದಂತೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಹಲವು ಸುತ್ತಿನ ಸಭೆ ಚರ್ಚೆಗಳು ನಡೆದ ಬಳಿಕ ಆರ್ಥಿಕ ಇಲಾಖೆ ಹಳೇ ತಾಲೂಕುಗಳನ್ನು ಪರಿಗಣಿಸಿ 176 ಕೋಚ್ ಕಂ ಸಂಯೋಜಕರ ಹುದ್ದೆಗಳನ್ನು ಮಂಜೂರು ಮಾಡಿದೆ ಎಂದು ತಿಳಿಸಿದ್ದಾರೆ.
ಕ್ರೀಡಾ ಇಲಾಖೆಯು ಇತಿಹಾಸದಲ್ಲೇ ಮೊದಲ ಬಾರಿಗೆ ತಾಲೂಕು ಮಟ್ಟದ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ಅದಕ್ಕಾಗಿ ಮುಖ್ಯಮಂತ್ರಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ.ಶೀಘ್ರದಲ್ಲೇ ನೇಮಕ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.