ನವದೆಹಲಿ: ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಕಾಯ್ದೆ (ಪೋಕ್ಸೊ) ಜಾತ್ಯತೀತ ಕಾನೂನು ಮತ್ತು ಅಪ್ರಾಪ್ತ ವಯಸ್ಕರ ನಡುವೆ ಮದುವೆಗೆ ಅನುಮತಿಸುವ ಎಲ್ಲಾ ಸಾಂಪ್ರದಾಯಿಕ ನಂಬಿಕೆಗಳನ್ನು ತೆಗೆದುಹಾಕುತ್ತದೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್ಸಿಪಿಸಿಆರ್) ಸುಪ್ರೀಂ ಕೋರ್ಟ್ನಲ್ಲಿ ವಾದಿಸಿದೆ.
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಬರುವ ಮಕ್ಕಳ ಹಕ್ಕುಗಳ ಸಂಸ್ಥೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿದ ಮೇಲ್ಮನವಿಯಲ್ಲಿ ಈ ಹೇಳಿಕೆ ನೀಡಿದೆ. ಅಂದ ಹಾಗೇ ಹೈಕೋರ್ಟ್ ತನ್ನ ಜೂನ್ 13 ರ ಆದೇಶದಲ್ಲಿ 16 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮುಸ್ಲಿಂ ಹುಡುಗಿ ಧಾರ್ಮಿಕ ನಂಬಿಕೆಗಳ ಪ್ರಕಾರ ತನ್ನ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗಲು ಸಮರ್ಥಳಾಗಿದ್ದಾಳೆ ಎಂದು ಹೇಳಿತ್ತು.
ಪೊಲೀಸ್ ರಕ್ಷಣೆ ಕೋರಿ 21 ವರ್ಷದ ಯುವಕ ಮತ್ತು 16 ವರ್ಷದ ಯುವತಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ಪ್ರಕರಣ ನಡೆದಿದೆ. ಅವರು ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ ಮತ್ತು ಅವರು ತಮ್ಮ ಹೆತ್ತವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಾರೆ ಎಂದು ಹೇಳಲಾಗಿದೆ. ಈ ನಡುವೆ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ ಎನ್ಸಿಪಿಸಿಆರ್, ಅಪ್ರಾಪ್ತ ವಯಸ್ಸಿನ ಹುಡುಗಿಯ ವಿವಾಹದ ಸಿಂಧುತ್ವದ ಬಗ್ಗೆ ಹೈಕೋರ್ಟ್ ತನ್ನ ನಿರ್ಧಾರದಲ್ಲಿ ಸುಪ್ರೀಂ ಕೋರ್ಟ್ ಈಗಾಗಲೇ ನಿಗದಿಪಡಿಸಿದ ಶಾಸನಬದ್ಧ ನಿಬಂಧನೆಗಳು ಮತ್ತು ಕಾನೂನು ತತ್ವಗಳನ್ನು ನಿರ್ಲಕ್ಷಿಸಿದೆ ಎಂದು ಹೇಳಿದೆ. ಈ ಆದೇಶವು ಪೋಕ್ಸೊವನ್ನು ಮಾತ್ರವಲ್ಲ, ಬಾಲ್ಯವಿವಾಹ ನಿಷೇಧ ಕಾಯ್ದೆ (ಪಿಸಿಎಂಎ) 2006 ಅನ್ನು ಉಲ್ಲಂಘಿಸಿದೆ ಎಂದು ಎನ್ಸಿಪಿಸಿಆರ್ ಹೇಳಿದೆ.