* ರಂಜಿತ್ ಶೃಂಗೇರಿ ಕೆಎನ್ಎನ್ ಡೆಸ್ಕ್
ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಮಲೆನಾಡು ಕೃಷಿಕ ವರ್ಗವನ್ನು ಕಾಡುತ್ತಿರುವ ಎಲೆಚುಕ್ಕೆ ರೋಗ ಹೆಮ್ಮಾರಿಯಾಗಿ ಅಡಕೆ ತೋಟವನ್ನು ನಾಶ ಮಾಡುತ್ತಿದೆ. ಕಷ್ಟಪಟ್ಟು ಸಾಲಸೂಲ ಮಾಡಿ ಅಡಕೆ ತೋಟ ಬೆಳೆಸಿದ ರೈತರಿಗೆ ಎಲೆಚುಕ್ಕೆ ರೋಗ ದೊಡ್ಡ ಕಂಟಕವಾಗಿದೆ.
ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ರೋಗ ಹೆಚ್ಚಿನ ಪ್ರಮಾಣದಲ್ಲಿ ಆವರಿಸಿದೆ. ಇನ್ನೂ, . ಬಯಲು ಸೀಮೆಯಾದ ತುಮಕೂರಿನಲ್ಲಿಯೂ ನಿರಂತರ ಮಳೆ ಹಾಗೂ ಶೀತ ವಾತಾವರಣದಿಂದ ಎಲೆ ಚುಕ್ಕೆ ರೋಗ ಹರಡುತ್ತಿದೆ.. ಎಲೆ ಚುಕ್ಕೆ ರೋಗದ ಜತೆಗೆ ಕೆಲವೆಡೆ ಕೊಳೆ ರೋಗ, ಹಳದಿ ರೋಗ , ಹರಳು ಉದುರುವ ಸಮಸ್ಯೆ ಉಂಟಾಗಿದ್ದು, ರೈತರು ಆತಂಕದಲ್ಲಿದ್ದಾರೆ.
ಅದರಲ್ಲೂ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲೂಕಿನಲ್ಲಿ ಎಲೆಚುಕ್ಕೆ ರೋಗದಿಂದ ಅಡಕೆ ತೋಟ ಒಣಗಿ ನಿಂತಿದ್ದು..ಮುಂದೇನು ಎಂಬ ಚಿಂತೆ ಕೃಷಿಕ ವರ್ಗದ ಜನರನ್ನು ಕಾಡುತ್ತಿದೆ.
* ಎಲೆಚುಕ್ಕೆ ರೋಗಕ್ಕೆ ಕಾರಣವೇನು..?
ಎಲೆಚುಕ್ಕೆ ರೋಗವು ಕೊಲ್ಲೆಟೋಟ್ರೈಕಮ್ ಗ್ಲೀಯೋಸ್ಪೊರೈಡ್ಸ್ ಮತ್ತು ಫಿಲ್ಲೊಸ್ಟಿಕ್ಟ ಅರಕೆ ಎಂಬ ಎರಡು ಶಿಲೀಂದ್ರಗಳಿಂದ ಉಂಟಾಗುತ್ತದೆ. ಶಿಲೀಂದ್ರವು ಬಿದ್ದ ಗರಿಗಳಲ್ಲಿ ವಾಸಿಸುತ್ತದೆ. ಮಳೆಹನಿಗಳು ಚಿಮ್ಮುವುವಿಕೆಯಿಂದ ಶಿಲೀಂದ್ರದ ಕಣಗಳು ಗಾಳಿಯಲ್ಲಿ ಸೇರಿ ಗರಿಗಳನ್ನು ತಲುಪುತ್ತವೆ. ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ರೋಗ ಕಾಣಿಸಿಕೊಳ್ಳುತ್ತದೆ.
ರೋಗ ಬಾಧಿತ ಮರಗಳ ಕೆಳಗಿನ ಸೋಗೆಗಳ ಮೇಲ್ಭಾಗದಲ್ಲಿ ಹಳದಿ ಮತ್ತು ಕಪ್ಪು ಬಣ್ಣದ ಚುಕ್ಕೆಗಳು ಕಾಣಿಸುತ್ತವೆ. ಈ ಚುಕ್ಕೆಗಳು ಶೀಘ್ರವಾಗಿ ಒಂದಕ್ಕೊಂದು ಕೂಡಿಕೊಂಡು ಪೂರ್ತಿ ಹೆಡೆಗಳನ್ನು ಆವರಿಸುತ್ತದೆ. ನಂತರ ಹೆಡೆಗಳು ಒಣಗಲಾರಂಭಿಸುತ್ತವೆ. ಇಂತಹ ಒಣಗಿದ ಎಲ್ಲಾ ಹೆಡೆಗಳು ಜೋತು ಬಿದ್ದು ಮರ ಶಕ್ತಿ ಕಳೆದುಕೊಂಡು ಇಳುವರಿ ಕುಂಠಿತವಾಗುತ್ತದೆ.
* ಎಲೆ ಚುಕ್ಕೆ ರೋಗಕ್ಕೆ ಪರಿಹಾರವೇನು
1) ಎಲೆ ಚುಕ್ಕೆ ರೋಗ ಬಾಧಿತ ಗರಿಗಳನ್ನು ಕತ್ತರಿಸಿ ತೆಗೆದು ನಾಶಪಡಿಸುವುದರಿಂದ ರೋಗ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಯಬಹುದು.
2) ಬಿಸಿಲು ಬೀಳುವಂತೆ ಮಾಡಲು ಕಾಡು ಮರಗಳ ಹೆಚ್ಚುವರಿ ರೆಂಬೆಗಳನ್ನು ಕತ್ತರಿಸಿ ತೆಗೆಯಬೇಕು.
3) 100 ಲೀಟರ್ ನೀರಿಗೆ 1 ಕೆ.ಜಿ. ಮೈಲುತುತ್ತ, 1 ಕೆ.ಜಿ.ಸುಣ್ಣ ಬೆರೆಸಿ ಮರಗಳ ಹೆಡಲಿಗೆ ಸಿಂಪರಣೆ ಮಾಡಬೇಕು.
4) 1 ಲೀಟರ್ ನೀರಿಗೆ 2 ಗ್ರಾಂ ಕಾರ್ಬನ್ ಡೈಸಿಮ್, 1 ಲೀ ನೀರಿಗೆ 2 ಗ್ರಾಂ ಮ್ಯಾಂಕೋಜೆಬ್, 1 ಲೀ. ನೀರಿಗೆ 1 ಎಂಎಲ್ ಹೆಕ್ಸಾಕೊನಜೋಲ್, 1 ಲೀಟರ್ ನೀರಿಗೆ 3 ಗ್ರಾಂ ಕಾಪರ್ ಆಕ್ಸಿಕ್ಲೋರೈಡ್ ಇವುಗಳಲ್ಲಿ ಯಾವುದಾದರೊಂದು ಔಷಧ ಸಿಂಪಡಣೆ ಮಾಡಬೇಕು.
5) ಮಣ್ಣು ಪರೀಕ್ಷೆ ಮಾಡಿಸಿ ಅದರ ಆಧಾರದ ಮೇಲೆ ಪೋಷಕಾಂಶ ನೀಡಬೇಕು. ಜೈವಿಕ ಗೊಬ್ಬರ ಬಳಕೆ ಮಾಡಬೇಕು.
* ಎಲೆ ಚುಕ್ಕೆ ರೋಗಕ್ಕೆ ಸರ್ಕಾರದಿಂದ ಪರಿಹಾರ ಧನ
ಅಡಿಕೆಗೆ ಎಲೆಚುಕ್ಕೆ ರೋಗ ಹಿನ್ನೆಲೆಯಲ್ಲಿ ಅಡಿಕೆ ಬೆಳೆಗಾರರಿಗೆ ತಲಾ 1 ಹೆಕ್ಟೇರ್ ಗೆ ಔಷಧ ಸಿಂಪಡಣೆಗೆ ರಾಜ್ಯ ಸರ್ಕಾರ 4 ಸಾವಿರ ರೂ. ಆರ್ಥಿಕ ನೆರವು ನೀಡಲಿದೆ. ಅಡಿಕೆಗೆ ಎಲೆಚುಕ್ಕೆ ರೋಗಕ್ಕೆ ಔಷಧಿ ಸಿಂಪಡಣೆಗೆ ಪ್ರತಿ ಹೆಕ್ಟೇರ್ ಗೆ 4 ಸಾವಿರ ರೂ. ಹಾಗೂ ಮೊದಲ ಸಿಂಪಡಣೆಗೆ 1.5 ಹೆಕ್ಟೇರ್ ಅಡಿಕೆ ತೋಟ ಹೊಂದಿರುವ ರೈತರಿಗೆ ಆರ್ಥಿಕ ನೆರವು ಸಿಗಲಿದೆ. ಈ ಬಗ್ಗೆ ರೈತರು ಹತ್ತಿರದ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.
* ಹೊರನಾಡಿನಲ್ಲಿ ಹೋಮ-ಪೂಜೆ ಹವನ
ಮಲೆನಾಡಿನ ಮುಖ್ಯ ಬೆಳೆಯಾದ ಅಡಿಕೆಯನ್ನು ಕಾಡುತ್ತಿರುವ ಎಲೆಚುಕ್ಕೆ ರೋಗ ನಿವಾರಣೆಗೆ ಹೋಮ, ಹವನವನ್ನು ನಡೆಸುತ್ತಿರುವುದಾಗಿ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಮುಖ್ಯಸ್ಥ ಜಿ.ಭೀಮೇಶ್ವರ ಜೋಷಿ ತಿಳಿಸಿದ್ದಾರೆ.
ರೈತರು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಆಗಮಿಸಿ ದೇವಿಯ ದರ್ಶನ ಮಾಡಬೇಕು, ದೇವಸ್ಥಾನದಲ್ಲಿ ಶ್ರೀಮುಡಿ ಗಂಧಪ್ರಸಾದ ಸ್ವೀಕರಿಸಿ ಅದನ್ನು ತಮ್ಮ ಜಮೀನಿಗೆ ತೆಗೆದುಕೊಂಡು ಹೋಗಿ ಸಿಂಪಡಿಸಬೇಕು ಎಂದು ಜಿ.ಭೀಮೇಶ್ವರ ಜೋಷಿ ಕರೆ ನೀಡಿದ್ದಾರೆ.
ನಮಗೆ ಭಾರತ ಜೋಡೋ ಯಾತ್ರೆಯಲ್ಲಿನ ಜನಮನ್ನಣೆಯೇ, ಪಕ್ಷದ ಬಲವರ್ದನೆಗೆ ಉತ್ತೇಜನ – ರಮೇಶ್ ಬಾಬು