ಬಳ್ಳಾರಿ : ಈ ಹಿಂದೆ ದೊರೆಯುತ್ತಿದ್ದ ಖಾಸಗಿ ಕಂಪನಿಗಳ ರಸಗೊಬ್ಬರಗಳು ಹಾಗೂ ಕೃಷಿ ಪರಿಕರಗಳು ಮುಂದೆ ಭಾರತ್ ಬ್ರ್ಯಾಂಡ್ಗಳಲ್ಲಿ ಎಲ್ಲಾ ಫರ್ಟಿಲೈಜರ್ ಅಂಗಡಿಗಳಲ್ಲಿ ದೊರೆಲಿದೆ ಎಂದು ಕೃಷಿ ಸಚಿವರಾದ ಬಿ.ಸಿ ಪಾಟೀಲ್ ಅವರು ಹೇಳಿದರು.
BIGG NEWS : ವಿಕಲಚೇತನ ವಿದ್ಯಾರ್ಥಿಗಳೇ ಗಮನಿಸಿ : ನ್ಯಾಷನಲ್ ಇ-ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ
ಸೋಮವಾರದಂದು ನಗರದ ಕೆಸಿ ರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ಸೀಡ್ಸ್ ಮತ್ತು ಫರ್ಟಿಲೈಜರ್ಸ್ನ ಪ್ರಧಾನಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶದ ಪ್ರಧಾನಿ ಮಂತ್ರಿಗಳ ಆಶಯದಂತೆ ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳು ರಾಜ್ಯದಲ್ಲಿ 43 ಕೇಂದ್ರಗಳು ಉದ್ಘಾಟನೆಗೊಳ್ಳಲಿದ್ದು, ಅದರಲ್ಲಿ ಬಳ್ಳಾರಿಯ ಶ್ರೀ ವೆಂಕಟೇಶ್ವರ ಸೀಡ್ಸ್ ಮತ್ತು ಫರ್ಟಿಲೈಜರ್ಸ್ನ ಅಂಗಡಿಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರವು ಉದ್ಘಾಟನೆಗೊಳ್ಳಲಿದೆ. ಇಲ್ಲಿ ಸಿಗುವಂತಹ ಎಲ್ಲಾ ಕೃಷಿ ರಸಗೊಬ್ಬರಗಳು ಭಾರತ್ ಬ್ರ್ಯಾಂಡ್ಗಳಲ್ಲಿ ದೊರೆಯಲಿವೆ ಎಂದು ಅವರು ಹೇಳಿದರು.
ಈ ಮುಂಚೆ ದೊರೆಯುತ್ತಿದ್ದ ಯುರಿಯಾ 1 ಚೀಲ ಗೊಬ್ಬರದ ಬೆಲೆಯು ರೂ.1666 ಇದ್ದು, ಈಗ ರೂ.266ಕ್ಕೆ ದೊರೆಯಲಿದೆ. ಇನ್ನುಳಿದ ರೂ.1400 ಸಬ್ಸಿಡಿ ರೂಪದಲ್ಲಿ ಕೇಂದ್ರ ಸರ್ಕಾರ ವೆಚ್ಚ ಭರಿಸಲಿದೆ. ಅದರಂತೆಯೇ 1 ಚೀಲ ಗೊಬ್ಬರಕ್ಕೆ ಡಿಎಪಿ ಬೆಲೆ ರೂ.3850 ಇದ್ದು, ರೂ.1350 ನೀಡಿದರೆ ಇನ್ನುಳಿದ ರೂ.2500 ಸಬ್ಸಿಡಿ ಸಿಗಲಿದೆ. ಎಂಒಪಿ ಬೆಲೆ ರೂ.2459 ಇದ್ದು, ರೂ.1700 ಕ್ಕೆ ರೈತರಿಗೆ ವಿತರಿಸಲಾಗುತ್ತಿದ್ದು, ಇನ್ನುಳಿದ ರೂ.759 ಗಳನ್ನು ಸಬ್ಸಿಡಿ ನೀಡಲಿದೆ ಹಾಗೂ ಕಾಂಪ್ಲೆಕ್ಸ್ 1 ಚೀಲದ ಗೊಬ್ಬರದ ಬೆಲೆ ರೂ.3204 ಇದ್ದು, ರೈತರಿಗೆ ರೂ.1470ಕ್ಕೆ ನೀಡಲಿದ್ದು, ರೂ.1734 ಕೇಂದ್ರ ಸರ್ಕಾರದಿಂದ ಸಬ್ಸಿಡಿ ರೂಪದಲ್ಲಿ ಒದಗಿಸಲಿದೆ ಎಂದು ಅವರು ತಿಳಿಸಿದರು.
ಒಟ್ಟಾರೆಯಾಗಿ 2020 ಲಕ್ಷ ಕೋಟಿ ರೂ. ಹಣವನ್ನು ರೈತರು ರಸಗೊಬ್ಬರವನ್ನು ಕೊಂಡುಕೊಳ್ಳಲು ಕೇಂದ್ರ ಸರ್ಕಾರವು ಸಬ್ಸಿಡಿ ರೂಪದಲ್ಲಿ ಹಣ ನೀಡಲಿದೆ ಎಂದು ತಿಳಿಸಿದರು.
ಪ್ರಧಾನಮಂತ್ರಿಗಳು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ರಾಜ್ಯದಲ್ಲಿರುವ 50 ಲಕ್ಷ ರೈತರಿಗೆ ಒಂದು ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದ ಅವರು, ಕೇಂದ್ರ ಸರ್ಕಾರವು ವರ್ಷಕ್ಕೆ ರೂ.6ಸಾವಿರ 3 ಕಂತುಗಳಲ್ಲಿ ಮತ್ತು ರಾಜ್ಯ ಸರ್ಕಾರವು ರೂ.4ಸಾವಿರ 2 ಕಂತುಗಳಲ್ಲಿ ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಹಣ ಬಿಡುಗಡೆ ಮಾಡಲಿದೆ ಎಂದು ಹೇಳಿದರು.
ಇನ್ನು ಮುಂದೆ ಒಂದೇ ಅಂಗಡಿಯಲ್ಲಿ ಎಲ್ಲಾ ತರಹದ ರಸಗೊಬ್ಬರಗಳು, ಔಷಧಿಗಳು, ಕೃಷಿ-ಪರಿಕರಗಳು ಹಾಗೂ ಗುಣಮಟ್ಟದ ಬಿತ್ತನೆ ಬೀಜಗಳು, ಕೀಟ ನಾಶಕಗಳು ಸೇರಿದಂತೆ ಇನ್ನಿತರೆ ಎಲ್ಲಾ ವಸ್ತುಗಳನ್ನು ಸಕಾಲದಲ್ಲಿ ಸೂಕ್ತ ಬೆಲೆಗಳಲ್ಲಿ ಒದಗಿಸಿಕೊಡುವುದೇ ರಾಜ್ಯದ ಪ್ರಧಾನಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಅದೇರೀತಿಯಾಗಿ ಕೇಂದ್ರದಲ್ಲಿ ಮಣ್ಣು, ಬೀಜ, ರಸಗೊಬ್ಬರ ವಿಶ್ಲೇಷಣೆ ಮತ್ತು ಕೃಷಿ ಸಂಬಂಧಿತ ಇಲಾಖೆಗಳಿಂದ ರೈತರಿಗೆ ಸೌಲಭ್ಯಗಳ ಬಗ್ಗೆ ಮಾಹಿತಿ, ವಿವಿಧ ಬೆಳೆಗಳಿಗೆ ಸಂಬಂಧಿಸಿದ ಸುಧಾರಿತ ಬೇಸಾಯಗಳ ಮಾಹಿತಿ, ಕಡಿಮೆ ಬಾಡಿಗೆ ದರದಲ್ಲಿ ಕೃಷಿ ಯಂತ್ರೋಪಕರಣಗಳ ಲಭ್ಯತೆ ಹಾಗೂ ಇತರೆ ಸೇರಿದಂತೆ ಮಾಹಿತಿಯನ್ನು ರೈತರಿಗೆ ತಿಳಿಸುವುದೇ ಪ್ರಧಾನಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರ ಯೋಜನೆಯ ಮೂಲ ಉದ್ದೇಶವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿಗಳು ವರ್ಚುವಲ್ ಮೂಲಕ ಪ್ರಧಾನಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ಅನಾವರಣಗೊಳಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೃಷಿ ಚಟುವಟಿಕೆಗಳಲ್ಲಿ ಸಾಧನೆಗೈದ ರೈತರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಸದರಾದ ವೈ.ದೇವೆಂದ್ರಪ್ಪ, ಬಳ್ಳಾರಿ ನಗರ ಶಾಸಕರಾದ ಜಿ.ಸೋಮಶೇಖರ ರೆಡ್ಡಿ, ಕೃಷಿ ಜಂಟಿ ನಿರ್ದೇಶಕರಾದ ಡಾ.ಮಲ್ಲಿಕಾರ್ಜುನ, ಸಹಾಯಕ ನಿರ್ದೇಶಕರಾದ ದಯಾನಂದ್, ಫರ್ಟಿಲೈಜರ್ ಕಂಪನಿಯ ವ್ಯವಸ್ಥಾಪಕರಾದ ಸುರೇಶ್ಕುಮಾರ್, ಸಿಸಿಒ ಹರ್ಷದೀಪ, ಫರ್ಟಿಲೈಜರ್ ಕಮಿಟಿಯ ಸದಸ್ಯರಾದ ಕೃಷ್ಣಾರೆಡ್ಡಿ, ಶಿವ ರೆಡ್ಡಿ, ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಅಧ್ಯಕ್ಷರಾದ ಗಣಪಾಲ ಐನಾತ ರೆಡ್ಡಿ ಸೇರಿದಂತೆ ರೈತರು ಹಾಗೂ ಇನ್ನಿತರರು ಇದ್ದರು.