ಬೆಂಗಳೂರು : ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ (Beloor Raghavendra Shetty) ವಿರುದ್ಧ ದಾಖಲಾಗಿರುವ FIR ವಿಚಾರಕ್ಕೆ ಕರಕುಶಲ ಅಭಿವೃದ್ಧಿ ನಿಗಮದ ಎಂಡಿ ಡಿ. ರೂಪಾ ಪ್ರತಿಕ್ರಿಯೆ ನೀಡಿದ್ದಾರೆ.
ಸರ್ಕಾರ ನೇಮಕ ಮಾಡಿದಾಗ DIN ಡಿಸ್ಕ್ವಾಲಿ ಫೈ ನಂಬರ್ ಆಗಿದೆ ಎಂದು ಹೇಳಬೇಕಿತ್ತು. ಅದು ಗೊತ್ತಿದ್ದೂ ಹುದ್ದೆ ಅಲಂಕರಿಸಿ ಒಂದು ವರ್ಷ ಎಂಟು ತಿಂಗಳು ಸಂಬಳ ಪಡೆದಿದ್ದಾರೆ. ಸುಮಾರು 40 ಲಕ್ಷ ರೂಪಾಯಿಯಷ್ಟು ಹಣ ಪಡೆದುಕೊಂಡಂತಾಗಿದೆ. ನಿಗಮದಿಂದ ಎನ್ ಓ ಸಿ ಪಡೆದು ಕೈಗೊಂಡ ದುಬೈ ಪ್ರವಾಸ, ಸಂಬಳ ಸೇರಿ 40 ಲಕ್ಷ ರೂ ಹಣ ಪಡೆದಂತಾಗಿದೆ ಎಂದು ಹಿರಿಯ ಐಪಿಎಸ್ ಅಧಿಕಾರಿ ರೂಪಾ ಹೇಳಿದ್ದಾರೆ.
ನಾನು ಕಿಶೋರ್ ಕುಮಾರ್ ಜೊತೆ ಸಂಪರ್ಕ ಹೊಂದಿರುವ ಬಗ್ಗೆ ಯಾವುದೇ ದಾಖಲೆಗಳಿದ್ದರೆ ಬಹಿರಂಗಪಡಿಸಲಿ ಎಂಬುದಾಗಿ ಕರಕುಶಲ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಅವರು, ನಿಗಮದ ಎಂಡಿ ರೂಪ ಮೌದ್ಗಿಲ್ ಗೆ ಸವಾಲು ಹಾಕಿದ್ದರು.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನನಗೆ ಕಿಶೋರ್ ಯಾರು ಅನ್ನೋದೆ ಗೊತ್ತಿಲ್ಲ. ಅವರನ್ನ ಎಂದೂ ನೋಡೇ ಇಲ್ಲ. ಕಳೆದ ಒಂದೂವರೆ ವರ್ಷದಿಂದ ಎಲ್ಲಾ ನೋವನ್ನ ಅನುಭವಿಸಿಕೊಂಡು ಬಂದಿದ್ದೇನೆ. ಈಗಾಗಲೇ ಅವರ ವಿರುದ್ಧ ಸಿಎಸ್ ಗೆ ಎರಡು ದೂರು ಕೊಟ್ಟಿದ್ದೇನೆ. ಸಂಬಂಧಪಟ್ಟ ದಾಖಲೆಗಳನ್ನ ನೀಡಿದ್ದೇನೆ ಎಂದಿದ್ದರು.
ನಿಗಮದ ಎಂ.ಡಿ ರೂಪಾ ಮೌದ್ಗಿಲ್ ಅವರು ಕಡತಗಳನ್ನ ತಮ್ಮ ಮನೆಗೆ ತರಿಸಿಕೊಳ್ಳುತ್ತಿದ್ದರು. ಮನೆಯನ್ನೇ ಕಚೇರಿಯನ್ನಾಗಿ ಮಾಡಿಕೊಂಡಿದ್ದರು. ನಾನು ಅವರಿಗೆ ಆರು ಕೋಟಿ ಆರೋಪ ಮಾಡಿದ್ದೇನೆ. ನಿಗಮದ ಅಅಧ್ಯಕ್ಷನಾಗಿ ನನಗೆ ದಾಖಲೆಗಳನ್ನ ಕೊಡೋದಿಲ್ಲ ಅಂದ್ರೆ ಹೇಗೆ ? ಪ್ರತಿ ಹಂತದಲ್ಲೂ ದಾಖಲೆಗಳನ್ನ ಕೇಳಿದ್ದೆ. ಅದ್ಯಾವುದನ್ನೂ ಕೊಡಲಿಲ್ಲ ಎಂದು ಹೇಳಿದ್ದರು.