ಹುಬ್ಬಳ್ಳಿ : ಹುಬ್ಬಳ್ಳಿಯಿಂದ ಶಬರಿಮಲೆ, ವಾರಣಾಸಿಗೆ ವಿಶೇಷ ರೈಲು ಸೇವೆಯನ್ನು ಆರಂಭಿಸಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭರವಸೆ ನೀಡಿದ್ದಾರೆ.
ವಾಣಿಜ್ಯನಗರಿ ಹುಬ್ಬಳ್ಳಿ ಪವರಫುಲ್ ನೆಲ. ಇಲ್ಲಿನ ಆರಾಧ್ಯದೈವ ಸಿದ್ಧಾರೂಢರಿಗೆ ಭಕ್ತಿ ಪೂರ್ವಕ ಪ್ರಣಾಮಗಳು. ಹುಬ್ಬಳ್ಳಿಯನ್ನು ನೋಡಿದಾಕ್ಷಣ ಏನೋ ಒಂಥರಾ ಮನಸ್ಸಿಗೆ ಖುಷಿಯಾಗುತ್ತದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭಾವನಾತ್ಮಕವಾಗಿ ಮಾತನಾಡಿದರು.
ರೈಲ್ವೆ ಮೂರನೇ ದ್ವಾರ ಲೋಕಾರ್ಪಣೆ ಬಳಿಕ ಮಾತನಾಡಿದ ಅವರು, ದೇಶದ ಆರ್ಥಿಕತೆಯ ವೃದ್ಧಿಯಲ್ಲಿ ಜೋಶಿ ಹಾಗೂ ಪ್ರಧಾನಮಂತ್ರಿ ಕೊಡುಗೆ ಮಹತ್ವದ್ದಾಗಿದೆ. ಈಗಾಗಲೇ ಬಹಳ ಬೇಡಿಕೆ ಇಡಲಾಗಿದೆ. ಆದಷ್ಟು ಬೇಗ ಹುಬ್ಬಳ್ಳಿಯಿಂದ ಶಬರಿಮಲೆ ಹಾಗೂ ವಾರಣಾಸಿಗೆ ವಿಶೇಷ ರೈಲು ಸೇವೆಯನ್ನು ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.
ಕರ್ನಾಟಕ ಅಭಿವೃದ್ಧಿಗೆ ಮೋದಿ ಸಾಕಷ್ಟು ಅನುದಾನ ಕೊಟ್ಟಿದ್ದಾರೆ. ರೈಲ್ವೆಗೆ ಸಂಬಂಧಿಸಿದಂತೆ ಮೊದಲು ಕರ್ನಾಟಕಕ್ಕೆ 830 ಕೋಟಿ ಅನುದಾನ ಬರುತ್ತಿತ್ತು. ಇದರಿಂದ ಏನು ಆಗುತ್ತಿರಲಿಲ್ಲ. ಮೀಟರ್ ಗೇಜ್ನಿಂದ ಬ್ರಾಡ್ ಗೇಜ್ ಮಾಡಲು 20 ವರ್ಷ ಹಿಡಿದಿದೆ. ಆದರೆ, ಮೋದಿ ಬಂದ ಮೇಲೆ ದೇಶದ ವರ್ತಮಾನ ಬದಲಾಗಿದೆ. 6000 ಕೋಟಿ ರೈಲ್ವೆ ಅಭಿವೃದ್ಧಿಗೆ ಕೊಟ್ಟಿದ್ದಾರೆ. ಭೂಸ್ವಾಧೀನ ಹಾಗೂ ಹೊಸ ಮಾರ್ಗ ಅನುಷ್ಠಾನಕ್ಕೆ ಚಾಲನೆ ನೀಡಲಾಗಿದೆ ಎಂದರು.