ರಾಜಸ್ಥಾನ: ಬೆಳ್ಳಿಯ ಕಾಲುಂಗುರಗಳನ್ನು ಕದಿಯಲು ಕಳ್ಳರು 108 ವರ್ಷದ ವೃದ್ಧೆಯ ಕಾಲನ್ನೇ ಕತ್ತರಿಸಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ಭಾನುವಾರ ನಡೆದಿದೆ.
ನಿನ್ನೆ ಬೆಳಗ್ಗೆ ಸುಮಾರು 5 ಗಂಟೆ ವೇಳೆಯಲ್ಲಿ ಈ ಘಟನೆ ನಡೆದಿದೆ. ದರೋಡೆಕೋರರು ವೃದ್ಧೆಯನ್ನು ಮನೆಯಿಂದ ಹೊರಕ್ಕೆ ಎಳೆದೊಯ್ದು ಹರಿತವಾದ ಆಯುಧದಿಂದ ವೃದ್ಧೆಯ ಕಾಲನ್ನು ಕತ್ತರಿಸಿ ಬೆಳ್ಳಿಯ ಕಾಲುಂಗುರಗಳನ್ನು ಕದ್ದು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.
ವೃದ್ಧೆಯನ್ನು ಜಮುನಾ ದೇವಿ ಎಂದು ಗುರುತಿಸಲಾಗಿದೆ. ಮನೆಯಲ್ಲಿ ಎಲ್ಲರೂ ನಿದ್ರಿಸುತ್ತಿದ್ದರಿಂದ ಗಂಟೆಯಾದ್ರೂ ಈ ವಿಷಯ ಯಾರಿಗೂ ತಿಳಿದಿರಲಿಲ್ಲ. ನಂತ್ರ ಮಲಗಿದ್ದ ಆಕೆಯ ಮಗಳು, ಮೊಮ್ಮಗಳು ಎದ್ದು ಹೊರಬಂದ ನಂತರವೇ ವಿಷಯ ಗೊತ್ತಾಗಿದೆ. ತೀವ್ರ ರಕ್ತಸ್ರಾವ ಮತ್ತು ನೋವಿನಿಂದ ನರಳುತ್ತಿದ್ದ ಜಮುನಾ ದೇವಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ.
ಆರೋಪಿಗಳ ಸುಳಿವು ಇನ್ನೂ ಸಿಕ್ಕಿಲ್ಲ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿಕೊಂಡು ಶಂಕಿತರನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.