ಕೆಎನ್ಎನ್ಸಿನಿಮಾಡೆಸ್ಕ್: ರಿಲೀಸ್ ಗೆ ಒಂದು ತಿಂಗಳು ಬಾಕಿ ಇರುವಾಗಲೇ ದಿನಗಳನ್ನು ಎಣಿಕೆ ಮಾಡುವಂತೆ ಮಾಡುತ್ತಿರುವ ಸಿನಿಮಾ ಬನಾರಸ್. ಸಿನಿಮಾದ ಟ್ರೇಲರ್, ಸಾಂಗ್ ನೋಡಿದ ನಂತರ ಜನರಲ್ಲಿ ಸಿನಿಮಾ ನೋಡುವ ಕಾತರ ಹೆಚ್ಚಾಗಿದೆ. ಈ ಮಧ್ಯೆ ದಿನೇ ದಿನೇ ಒಂದೊಂದು ವಿಶೇಷ ಸುದ್ದಿಗಳು ಸಿನಿಮಾ ತಂಡದಿಂದ ಹೊರ ಬೀಳುತ್ತಿವೆ. ಬನಾರಸ್ ಹೇಳಿ ಕೇಳಿ ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಸಿದ್ಧವಾಗಿದೆ. ಹೀಗಿರುವಾಗ ಎಲ್ಲಾ ಭಾಷೆಗೂ ವಿತರಣೆ ಮಾಡುವ ಸಂಸ್ಥೆ ತುಂಬಾ ಮುಖ್ಯವಾಗುತ್ತದೆ. ಬನಾರಸ್ ಹೆಚ್ಚು ಸೌಂಡ್ ಮಾಡುತ್ತಿರುವುದೇ ಈ ಕಾರಣಕ್ಕೆ.
ಈಗಾಗಲೇ ಕನ್ನಡವನ್ನು ಡಿ ಬೀಟ್ಸ್ ತನ್ನ ತೆಕ್ಕೆಗೆ ತೆಗೆದುಕೊಂಡಾಗಿದೆ. ಕೇರಳದಲ್ಲಿ ಮಲಕುಪ್ಪಡಂ ಸಂಸ್ಥೆ ಖರೀದಿ ಮಾಡಿದೆ. ಇದೀಗ ಉತ್ತರ ಭಾರತದಲ್ಲಿ ರಿಲೀಸ್ ಮಾಡಲು ಖ್ಯಾತ ನಟ ಅಜಯ್ ದೇವಗನ್ ಕೂಡ ಭಾಗವಾಗಿರುವ ಪನೋರಮಾ ಸಂಸ್ಥೆ ವಿತರಣಾ ಹಕ್ಕನ್ನು ಪಡೆದುಕೊಂಡಿದೆ. ಪನೋರಮಾ ಸಂಸ್ಥೆ ವಿತರಣಾ ಹಕ್ಕನ್ನು ಪಡೆದುಕೊಂಡ ಕಾರಣ ಸಿನಿಮಾದ ಗೆಲುವಿನ ಬಗ್ಗೆ ನಿರೀಕ್ಷೆಗಳು ಹೆಚ್ಚಿವೆ.
ಪನೋರಮಾ ಸ್ಟುಡಿಯೋ ಬನಾರಸ್ ಸಿನಿಮಾ ವಿತರಣೆ ಮಾಡುತ್ತಿದೆ ಎಂದಾಗಲೇ ಹಲವರ ಚಿತ್ತ ಸಿನಿಮಾ ಮೇಲೆ ಹರಿದಿದೆ. ಪನೋರಮಾ ಸಂಸ್ಥೆಯಿಂದ ಸಿನಿಮಾವೊಂದು ರಿಲೀಸ್ ಆಗೋ ಹಂತ ತಲುಪಿಕೊಳ್ಳೋದು ಸುಲಭದ ಮಾತಲ್ಲ. ಎಲ್ಲಾ ಆಯಾಮಾದಿಂದಲೂ ಸಿನಿಮಾವನ್ನು ನೋಡುತ್ತೆ ಈ ಸಂಸ್ಥೆ. ಸಿನಿಮಾದ ಗುಣಮಟ್ಟವನ್ನು ಅಳೆದು ತೂಗಿಯೇ ವಿತರಣೆಯ ಹಕ್ಕನ್ನು ಪಡೆಯುತ್ತೆ. ಉತ್ತರ ಭಾರತದಲ್ಲಿ ಪನೋರಮಾ ಸ್ಟುಡಿಯೋ ದೊಡ್ಡ ಮಟ್ಟದ ಖ್ಯಾತಿ ಪಡೆದ ಸಂಸ್ಥೆಯಾಗಿದೆ. ಬಾಲಿವುಡ್ ಪಾಲಿಗಂತು ದೊಡ್ಡ ಹೆಸರು ಮಾಡಿರುವ ಸಂಸ್ಥೆ. ಘಟಾನುಘಟಿ ಸ್ಟಾರ್ ಗಳ ಸಿನಿಮಾ ವಿತರಣೆ ಮಾಡಿದೆ. ಹೀಗಾಗಿ ಉತ್ತರ ಭಾರತದಾದ್ಯಂತ ಸಿನಿಮಾ ಗೆಲ್ಲುವ ಮೊದಲ ಹಂತದ ಸುಳಿವು ಈಗಾಗಲೇ ಸಿಕ್ಕಾಗಿದೆ. ಇದು ಸಹಜವಾಗಿಯೇ ಚಿತ್ರತಂಡವನ್ನು ಖುಷಿಯಲ್ಲಿ ತೇಲಿಸುತ್ತಿದೆ. ಎಲ್ಲಾ ಭಾಷೆಯಲ್ಲೂ ವಿತರಣಾ ಹಕ್ಕನ್ನು ದೊಡ್ಡ ದೊಡ್ಡ ಸಂಸ್ಥೆಗಳೇ ಪಡೆದುಕೊಳ್ಳುತ್ತಿವೆ. ನವೆಂಬರ್ 4ಕ್ಕೆ ಸಿನಿಮಾ ತೆರೆಗೆ ಬರಲಿದೆ.