ಬೆಂಗಳೂರು: ವಿಧಾನಸೌಧದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಎಸ್ ಸಿಗೆ 17% ಹಾಗೂ ಎಸ್ ಟಿಗೆ 7% ಮೀಸಲಾತಿ ಹೆಚ್ಚಿಸಲು ಸಮ್ಮತಿ ಸೂಚಿಸಲಾಗಿದೆ. ಈ ಸಂಬಂಧ ಸರ್ಕಾರಿ ಆದೇಶ ಹೊರಡಿಸಲು ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.
ಎರಡು ಮೂರು ದಿನಗಳಲ್ಲಿ ಸರ್ಕಾರಿ ಆದೇಶ ಹೊರಬೀಳಲಿದೆ. ಸರ್ಕಾರಿ ಆದೇಶದಲ್ಲಿ ಯಾವ ರೀತಿ ಮೀಸಲಾತಿ ಕಲ್ಪಿಸಲಾಗುತ್ತೆ ಎಂಬ ಬಗ್ಗೆ ವಿವರವಾಗಿ ಉಲ್ಲೇಖಿಸಲಾಗುತ್ತದೆ ಎಂದರು.ಮೀಸಲಾತಿ ಪ್ರಮಾಣ ಶೇಕಡ 50ರಷ್ಟನ್ನು ಮೀರಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಆ ಹಿನ್ನೆಲೆ ಸಂವಿಧಾನದ ಪರಿಚ್ಛೇದ 9ರ ವ್ಯಾಪ್ತಿಗೆ ಕರ್ನಾಟಕದ ಮೀಸಲಾತಿ ವಿಷಯವನ್ನು ಸೇರಿಸಿ ಮೀಸಲಾತಿ ಹೆಚ್ಚಿಸಲಾಗುತ್ತದೆ.
ಇದರಿಂದ ನ್ಯಾಯಾಲಯದ ಪರಿಶೀಲನೆ ವ್ಯಾಪ್ತಿಯಿಂದ ಹೊರಗಿಡಲು ಸಾಧ್ಯವಾಗುತ್ತದೆ. ತಮಿಳುನಾಡಿನಲ್ಲಿ ಶೆಡ್ಯೂಲ್ 9ಕ್ಕೆ ಸೇರಿಸಿ ಮೀಸಲಾತಿ ನೀಡಲಾಗಿದೆ. ಹೀಗಾಗಿ ಸುಪ್ರೀಂಕೋರ್ಟ್ ಅಲ್ಲಿನ ಮೀಸಲಾತಿಗೆ ತಡೆಯಾಜ್ಞೆ ನೀಡಲು ಸಾಧ್ಯವಾಗಿಲ್ಲ. ಇಲ್ಲೂ ಶೆಡ್ಯೂಲ್ 9 ವ್ಯಾಪ್ತಿಗೆ ಮೀಸಲಾತಿ ಸೇರಿಸುವ ಸಂಬಂಧ ಚರ್ಚೆ ನಡೆಸಿ ಕೇಂದ್ರಕ್ಕೆ ಮುಂದೆ ಶಿಫಾರಸು ಕಳುಹಿಸಲಾಗುತ್ತದೆ ಎಂದು ಇದೇ ವೇಳೆ ತಿಳಿಸಿದರು.
ಪರಿಶಿಷ್ಟ ಜಾತಿ (SC) ಮೀಸಲಾತಿಯನ್ನು ಶೇ. 15 ರಿಂದ ಶೇ. 17 ಹಾಗೂ ಪರಿಶಿಷ್ಟ ಪಂಗಡ (ST) ಮೀಸಲಾತಿಯನ್ನು 3 ರಿಂದ ಶೇ. 7 ಕ್ಕೆ ಹೆಚ್ಚಳ ಮಾಡಿ 2-3 ದಿನಗಳಲ್ಲಿ ಅಧಿಕೃತ ಆದೇಶ ಹೊರಡಿಸಲಾಗುವುದು. ಸರ್ಕಾರದ ಆದೇಶ ಪ್ರಕಟವಾದ ಕ್ಷಣದಿಂದಲೇ ಮೀಸಲಾತಿ ಹೆಚ್ಚಳ ಜಾರಿಯಾಲಿದೆ ಎಂದು ತಿಳಿಸಿದ್ದಾರೆ.